ವಾಷಿಂಗ್ಟನ್: ಭಾರತದ ಶೇ.7ರ ಆರ್ಥಿಕ ಬೆಳವಣಿಗೆ ದರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಡಿಮೆ ಬಡ್ಡಿದರ ನೀತಿಯನ್ನು ಉಲ್ಲೇಖಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಾಗಿಯೇ ಇರಿಸಿರುವ ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ (ಫೆಡ್) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಮೆರಿಕದ ಫೆಡರಲ್ ರಿಸರ್ವ್ ಅತ್ಯಂತ ರಾಜಕೀಯ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಬಡ್ಡಿದರಗಳು ತುಂಬಾ ಹೆಚ್ಚಾಗಿವೆ. ಇದಕ್ಕೆ ಕಾರಣ ನಮ್ಮಲ್ಲಿರುವ ಅತ್ಯಂತ ರಾಜಕೀಯ ಪ್ರೇರಿತ ಫೆಡ್. ನಾನು ಅದರ ಅಧ್ಯಕ್ಷರನ್ನು ದೂಷಿಸುತ್ತಿಲ್ಲ. ಆದರೆ, ಫೆಡ್‌ನ ಕಾರ್ಯವೈಖರಿ ರಾಜಕೀಯ ಪ್ರೇರಿತವಾಗಿದೆ. ನಾವು ಉತ್ತಮ ಆರ್ಥಿಕ ಅಂಕಿಅಂಶಗಳನ್ನು ಪ್ರಕಟಿಸಿದಾಗಲೆಲ್ಲ ಅವರು ಬಡ್ಡಿದರಗಳನ್ನು ಹೆಚ್ಚಿಸುತ್ತಾರೆ. ಅದಕ್ಕೆ ಒಂದು ಕಾರಣವಿದೆ. ಆದರೆ, ವಾಸ್ತವವಾಗಿ ಇದಕ್ಕೆ ವಿರುದ್ಧವಾಗಿ ನಡೆಯಬೇಕು ಎಂದು ಹೇಳಿದರು.
ನಾವು ಇದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ದೇಶವನ್ನು ನಾಶಪಡಿಸುವಂತಿದೆ. ಆರ್ಥಿಕ ಅಂಕಿಅಂಶಗಳು ಉತ್ತಮವಾಗಿರುವಾಗ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಇರಬಾರದು. ಬದಲಿಗೆ ಕಡಿಮೆ ಮಾಡಬೇಕು. ಏಕೆಂದರೆ ಆಗ ನಮ್ಮ ಸಾಲ ಮರುಪಾವತಿ ಸಾಮರ್ಥ್ಯ ಹೆಚ್ಚಿರುತ್ತದೆ. ನಮ್ಮ ಜಿಡಿಪಿ ಶೇ.4ರ ಬದಲಿಗೆ ಶೇ.15 ಅಥವಾ 20ರಷ್ಟು ಬೆಳೆಯುತ್ತಿತ್ತು. ಆಗ ನಾವು ಸಾಲವನ್ನು ಬಹಳ ವೇಗವಾಗಿ ತೀರಿಸಬಹುದಿತ್ತು. ನಡೆಯಬೇಕಾದದ್ದು ಹೀಗೆ. ಆದರೆ ನಾವು ತದ್ವಿರುದ್ಧವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಭಾರತದ ಆರ್ಥಿಕ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟು ಬೆಳವಣಿಗೆ ಕಾಣುತ್ತಿದೆ ಎಂದು ಗಮನ ಸೆಳೆದರು. ಇದೇ ಮಾದರಿಯನ್ನು ಅಮೆರಿಕ ಅನುಸರಿಸಿದರೆ ತನ್ನ ಆರ್ಥಿಕ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಭಾರತವನ್ನು ನೋಡಿ. ಅಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟಿದೆ. ನಾವು ಕೂಡ ಇದೇ ರೀತಿಯ ನೀತಿ ಅನುಸರಿಸಿದರೆ ನಮ್ಮ ಜಿಡಿಪಿ ಶೇ.14, 15 ಅಥವಾ ಬಹುಶಃ ಶೇ.20ರಷ್ಟು ಬೆಳೆಯಬಹುದು. ನೀವು ಉತ್ತಮ ಸಾಧನೆ ಮಾಡುತ್ತಿದ್ದರೂ ಫೆಡ್ ಬಡ್ಡಿದರ ಹೆಚ್ಚಿಸುವುದು ನಿಜಕ್ಕೂ ಬೇಸರದ ಸಂಗತಿ. ವಾಸ್ತವವಾಗಿ, ನಾವು ಈ ಎಲ್ಲ ಅಡೆತಡೆಗಳನ್ನು ಮೀರಿ ಮುನ್ನಡೆದಿದ್ದೇವೆ ಎಂದು ಹೇಳಿದರು.
ಉತ್ತಮ ಆರ್ಥಿಕ ಸಾಧನೆ ಕಂಡುಬಂದಾಗ ಅಮೆರಿಕ ಬಡ್ಡಿದರಗಳನ್ನು ಕಡಿಮೆ ಮಾಡಬೇಕು ಎಂದು ಅವರು ವಾದಿಸಿದರು.
ಆರ್ಥಿಕ ಅಂಕಿಅಂಶಗಳು ಸುಧಾರಿಸಿದರೆ ದೇಶದ ಸಾಲ ಮರುಪಾವತಿ ಸಾಮರ್ಥ್ಯವೂ ಹೆಚ್ಚುತ್ತದೆ. ಆದರೆ, ಫೆಡರಲ್ ರಿಸರ್ವ್ ಇದಕ್ಕೆ ವಿರುದ್ಧವಾದ ನೀತಿ ಅನುಸರಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯ ಸಾಧ್ಯತೆಗಳಿಗೆ ಕಡಿವಾಣ ಹಾಕುತ್ತಿದೆ ಎಂದು ಆರೋಪಿಸಿದರು.
(ಬಡ್ಡಿದರಗಳನ್ನು ಕಡಿಮೆ ಮಾಡಿದರೆ ಅಮೆರಿಕದ ಆರ್ಥಿಕ ಬೆಳವಣಿಗೆ ಶೇ.15ರಿಂದ 20ರವರೆಗೂ ತಲುಪಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶದಲ್ಲಿ ಉತ್ತಮ ಆರ್ಥಿಕ ಅಂಕಿಅಂಶಗಳು ಪ್ರಕಟವಾದಾಗಲೆಲ್ಲ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಬದಲು ಫೆಡ್ ಬಡ್ಡಿದರಗಳನ್ನು ಹೆಚ್ಚಿಸುತ್ತದೆ ಎಂದು ದೂರಿದರು.









ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)