ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission- KPSC) ತನ್ನ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ತರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ನವೆಂಬರ್ 15ರಂದು ನಡೆದಿದ್ದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಆಯೋಗವು ಪರೀಕ್ಷೆ ಮುಗಿದ ಕೇವಲ 6 ದಿನಗಳಲ್ಲಿಯೇ ಪ್ರಕಟಿಸಿದೆ. ಆ ಮೂಲಕ ಕೆಪಿಎಸ್ಸಿ(KPSC) ಹೊಸ ದಾಖಲೆ ಬರೆದಿದೆ.
ತಿಂಗಳುಗಳ ವಿಳಂಬಕ್ಕೆ ಬ್ರೇಕ್, ವೇಗದ ಪ್ರಕ್ರಿಯೆ
ಈ ಹಿಂದೆ ಕೆಪಿಎಸ್ಸಿ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡುವುದಕ್ಕೇ 15 ರಿಂದ 20 ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಇನ್ನು ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಹೊರಬೀಳಲು ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ, ಈ ಬಾರಿ ಆಯೋಗವು ಅತ್ಯಂತ ಕ್ಷಿಪ್ರಗತಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದು, ನವೆಂಬರ್ 15ರಂದು ಪರೀಕ್ಷೆ ನಡೆಸಿ, ಮರುದಿನವೇ ಅಂದರೆ ನವೆಂಬರ್ 16ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಕೇವಲ ಆರೇ ದಿನಗಳಲ್ಲಿ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಅಭ್ಯರ್ಥಿಗಳಿಗೆ ಅಚ್ಚರಿ ಮೂಡಿಸಿದೆ.
ಹಾಜರಾತಿ ಮತ್ತು ಆಕ್ಷೇಪಣೆಗೆ ಅವಕಾಶ
ನವೆಂಬರ್ 15ರಂದು ನಡೆದ ಈ ಪೂರ್ವಭಾವಿ ಪರೀಕ್ಷೆಯ ಮೊದಲ ಅವಧಿಗೆ ರಾಜ್ಯಾದ್ಯಂತ ಒಟ್ಟು 88,450 ಅಭ್ಯರ್ಥಿಗಳು ಹಾಜರಾಗಿದ್ದರೆ, ಎರಡನೇ ಅವಧಿಯ ಪರೀಕ್ಷೆಯನ್ನು 87,817 ಅಭ್ಯರ್ಥಿಗಳು ಬರೆದಿದ್ದರು. ಇದೀಗ ಪ್ರಕಟವಾಗಿರುವ ತಾತ್ಕಾಲಿಕ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಸಲ್ಲಿಸಲು ನಾಳೆ (ಸೋಮವಾರ) ಬೆಳಗ್ಗೆ 11 ಗಂಟೆಯವರೆಗೆ ಕೆಪಿಎಸ್ಸಿ ಕಾಲಾವಕಾಶ ನೀಡಿದೆ.
ನೇಮಕಾತಿ ಪ್ರಕ್ರಿಯೆಗಳಲ್ಲಿನ ವಿಳಂಬದಿಂದ ಬೇಸತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕೆಪಿಎಸ್ಸಿಯ ಈ ವೇಗದ ನಡೆ ಹೊಸ ಭರವಸೆ ಮೂಡಿಸಿದೆ.









ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)