ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕಠಿಣ ನಿಯಮ ಜಾರಿಗೆ ಸರ್ಕಾರದ ಚಿಂತನೆ

ಬೈಕ್ ಟ್ಯಾಕ್ಸಿ — ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕಠಿಣ ನಿಯಮ ಜಾರಿಗೆ ಸರ್ಕಾರದ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ(Bike Taxi Service) ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಒಲ್ಲದ ಮನಸ್ಸಿನಿಂದಲೇ ಕಠಿಣ ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ. ಬೈಕ್ ಟ್ಯಾಕ್ಸಿ(Bike Taxi) ಕಾರ್ಯಾಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಲಾಗಿದ್ದು, ಈ ಸಂಬಂಧ ಅಡ್ವೊಕೇಟ್ ಜನರಲ್ (AG) ಅವರ ಕಾನೂನು ಸಲಹೆಯನ್ನೂ ಪಡೆಯಲು ಸರ್ಕಾರ ನಿರ್ಧರಿಸಿದೆ. ಆ ಮೂಲಕ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಕಠಿಣ ನಿಯಮ(Bike Taxi Rules in Karnataka) ಜಾರಿಗೆ ಸರ್ಕಾರ ಮುಂದಾಗಿದೆ.

ಹಳದಿ ನಂಬರ್ ಪ್ಲೇಟ್ ಮತ್ತು ಪರವಾನಗಿ ಕಡ್ಡಾಯ?

ಸಾರಿಗೆ ಇಲಾಖೆಯ ಕಣ್ಗಾವಲಿಲ್ಲದೆ ಯಾರು ಬೇಕಾದರೂ ಬೈಕ್ ಟ್ಯಾಕ್ಸಿ ಓಡಿಸುವಂತಿಲ್ಲ ಎಂಬ ಕಠಿಣ ನಿಲುವನ್ನು ಸರ್ಕಾರ ತಾಳಿದೆ. ಖಾಸಗಿ ದ್ವಿಚಕ್ರ ವಾಹನಗಳನ್ನು (ವೈಟ್ ಬೋರ್ಡ್) ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೆ ಕಡಿವಾಣ ಹಾಕಲು, ಮೋಟಾರ್‌ಸೈಕಲ್‌ಗಳನ್ನು ನಿಯಮಾನುಸಾರ ಹಳದಿ ನಂಬರ್ ಪ್ಲೇಟ್ (Yellow Board) ಹೊಂದಿರುವ ಸಾರಿಗೆ ವಾಹನಗಳಾಗಿ ಪರಿವರ್ತಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಬೈಕ್ ಮಾಲೀಕರು ತಮ್ಮ ವಾಹನಗಳನ್ನು ವಾಣಿಜ್ಯ ವಾಹನಗಳಾಗಿ ನೋಂದಾಯಿಸಿಕೊಂಡು, ಒಪ್ಪಂದದ ಮೇರೆಗೆ ಪ್ರಯಾಣಿಕರನ್ನು ಸಾಗಿಸಲು ಅಧಿಕೃತ ಪರವಾನಗಿ (Permit) ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಸಂಬಂಧಪಟ್ಟ ಪ್ರಾಧಿಕಾರಗಳು ಕಾನೂನಿನ ಚೌಕಟ್ಟಿನಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಲಿವೆ.

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ಜಿಪಿಎಸ್ ಮತ್ತು ವಿಮೆ

ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಬೈಕ್ ಟ್ಯಾಕ್ಸಿಗಳಿಗೆ ಜಿಪಿಎಸ್ (GPS) ಅಳವಡಿಕೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಅಲ್ಲದೆ, ಪ್ರಯಾಣದ ವೇಳೆ ಅಪಘಾತ ಸಂಭವಿಸಿದರೆ ಪ್ರಯಾಣಿಕರಿಗೆ ರಕ್ಷಣೆ ನೀಡುವ ಉದ್ದೇಶದಿಂದ ವಾಹನಗಳಿಗೆ ಕಡ್ಡಾಯ ವಿಮೆ (Insurance) ಇರಬೇಕಾಗುತ್ತದೆ. ಅಪಘಾತವಾದ ಸಂದರ್ಭದಲ್ಲಿ ಚಾಲಕ, ವಾಹನ ಮಾಲೀಕ ಹಾಗೂ ಸೇವೆ ಒದಗಿಸುವ ಅಗ್ರಿಗೇಟರ್ ಸಂಸ್ಥೆಗಳ ಹೊಣೆಗಾರಿಕೆ ಏನು ಎಂಬುದನ್ನು ನಿಯಮಾವಳಿಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲು ಇಲಾಖೆ ಮುಂದಾಗಿದೆ.

💬 ಕಾಮೆಂಟ್ • Comments (0)

💬 ಓದುಗರ ಕಾಮೆಂಟ್‌ಗಳು • Reader Comments (0)

ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others