ಐದು ವರ್ಷದ ಮಗುವಿನ ಲಿವರ್ ದಾನದಿಂದ ಬಾಲಕಿಗೆ ಹೊಸ ಬದುಕು: ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಟ್ರಾನ್ಸ್‌ಪ್ಲಾಂಟ್

ಬೆಂಗಳೂರು: ಐದು ವರ್ಷದ ಮಗುವಿನ ಅಂಗಾಂಗ ದಾನವು 13 ವರ್ಷದ ಬಾಲಕಿ ಲಕ್ಷ್ಮೀ ಪ್ರಿಯಾ ಅವರಿಗೆ ಹೊಸ ಬದುಕಿನ ಭರವಸೆ ನೀಡಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಪರೂಪದ ಜನ್ಮಜಾತ ಪಿತ್ತನಾಳದ ಕಾಯಿಲೆ ಬಿಲಿಯರಿ ಅಟ್ರೇಶಿಯಾ (Biliary Atresia) ಯಿಂದ ಬಳಲುತ್ತಿದ್ದ ಲಕ್ಷ್ಮೀ ಪ್ರಿಯಾ ಅವರಿಗೆ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಇದೀಗ ಆರೋಗ್ಯಕರ ಜೀವನದತ್ತ ಚೇತರಿಸಿಕೊಳ್ಳುತ್ತಿದ್ದಾರೆ.

ಶಿಶುವಾಗಿದ್ದಾಗಲೇ ಕಾಯಿಲೆ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಕಸಾಯಿ ಪೋರ್ಟೋಎಂಟೆರೋಸ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೂ ಕಾಲಕ್ರಮೇಣ ಲಿವರ್‌ಗೆ ತೀವ್ರ ಹಾನಿಯಾಗಿದ್ದು, ಕಾಮಾಲೆ, ದೈಹಿಕ ಬೆಳವಣಿಗೆ ಕುಂಠಿತ, ಪದೇಪದೆ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಪೋರ್ಟಲ್ ಹೈಪರ್‌ಟೆನ್ಷನ್‌ನಿಂದ ಜೀರ್ಣಾಂಗದ ರಕ್ತಸ್ರಾವದ ಅಪಾಯ ಎದುರಿಸುತ್ತಿದ್ದರು.

2026ರ ಮಾರ್ಚ್‌ನಲ್ಲಿ ನಿರಂತರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಡಾ. ಗೌತಮ್ ಕುಮಾರ್ ನೇತೃತ್ವದ ತಜ್ಞರ ತಂಡ ಸಮಗ್ರ ವೈದ್ಯಕೀಯ ಮೌಲ್ಯಮಾಪನ ನಡೆಸಿ, ಲಿವರ್ ಟ್ರಾನ್ಸ್‌ಪ್ಲಾಂಟ್ ಮಾತ್ರವೇ ಜೀವ ಉಳಿಸುವ ಮಾರ್ಗ ಎಂದು ನಿರ್ಧರಿಸಿತು. ಪೋಷಕರು ಲಿವರ್ ದಾನಕ್ಕೆ ಮುಂದಾದರೂ, ಇಬ್ಬರೂ ಮಧುಮೇಹದಿಂದ ಬಳಲುತ್ತಿದ್ದ ಕಾರಣ ವೈದ್ಯಕೀಯವಾಗಿ ದಾನಕ್ಕೆ ಅರ್ಹರಾಗಲಿಲ್ಲ. ಹೀಗಾಗಿ ಮೃತ ದಾನಿಯ ಲಿವರ್‌ಗಾಗಿ ಕಾಯುವ ಪಟ್ಟಿಗೆ ಸೇರಿಸಲಾಯಿತು.

ಇದೇ ವೇಳೆ ಮೈಸೂರಿನ ಐದು ವರ್ಷದ ಮಗುವಿನ ಕುಟುಂಬ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಸಮ್ಮತಿಸಿತು. ಆ ಮಗುವಿನ ಲಿವರ್ ಲಕ್ಷ್ಮೀ ಪ್ರಿಯಾ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು. ಚಿಕಿತ್ಸೆಯ ವೆಚ್ಚ ಭರಿಸಲು ಅವರ ಊರಾದ ವರಿಯಾಪುರಂ ಗ್ರಾಮದ ಜನರು ಒಗ್ಗಟ್ಟಿನಿಂದ ಆರ್ಥಿಕ ನೆರವು ನೀಡಿರುವುದು ವಿಶೇಷ.

ಸ್ಪರ್ಶ್ ಆಸ್ಪತ್ರೆಯ ಎಚ್‌ಪಿಬಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್ ಸೇವೆಗಳ ಕನ್ಸಲ್ಟೆಂಟ್ ಡಾ. ಗೌತಮ್ ಕುಮಾರ್, “ಸಕಾಲದಲ್ಲಿ ದೊರೆತ ಅಂಗಾಂಗ ದಾನ, ವಿವಿಧ ವಿಭಾಗಗಳ ವೈದ್ಯರ ಸಮನ್ವಯ ಹಾಗೂ ಎಲ್ಲರ ಸಹಕಾರದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ಬಾಲಕಿಗೆ ಆರೋಗ್ಯಕರ ಜೀವನ ನಡೆಸುವ ಅವಕಾಶ ದೊರೆತಿದೆ” ಎಂದು ತಿಳಿಸಿದ್ದಾರೆ.

ಸ್ಪರ್ಶ್ ಆಸ್ಪತ್ರೆ, ಯಶವಂತಪುರದ ಯುನಿಟ್ ಸಿಒಒ ಅರ್ನಬ್ ಆದಕ್, “ಅಂಗಾಂಗ ದಾನವು ಮಾನವೀಯತೆಯ ಅತ್ಯುನ್ನತ ಸೇವೆ. ಒಂದು ಮಗುವಿನ ಜೀವ ಉಳಿಸಲು ಮತ್ತೊಂದು ಕುಟುಂಬದ ಅಂಗಾಂಗ ದಾನ ಹಾಗೂ ಇಡೀ ಗ್ರಾಮದ ಸಹಕಾರ ಒಂದಾದರೆ ಜೀವಗಳನ್ನು ಉಳಿಸಬಹುದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆ” ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *