ತನಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವೈವಾಹಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ದೂರಾಗುವ ದಂಪತಿಗಳ ಜೀವನಾಂಶ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ಪತಿಗಿಂತಲೂ ಹೆಚ್ಚಿನ ವೇತನ ಗಳಿಸುತ್ತಾ ಆರ್ಥಿಕವಾಗಿ ಸದೃಢವಾಗಿರುವ ಪತ್ನಿಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ಹೊರಡಿಸಿದ್ದು, ಪತ್ನಿಗೆ ಪ್ರತಿ ತಿಂಗಳು ಜೀವನಾಂಶ ಪಾವತಿಸುವಂತೆ ಕೆಳಹಂತದ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ ಏನು? ಇತ್ತೀಚಿನ ವರ್ಷಗಳಲ್ಲಿ ಮದುವೆಯಾಗಿದ್ದ ಈ ದಂಪತಿಗಳು, ದಾಂಪತ್ಯ ಜೀವನದಲ್ಲಿ ಮೂಡಿದ ಮನಸ್ತಾಪಗಳಿಂದಾಗಿ ಕೇವಲ ಕೆಲವೇ ತಿಂಗಳುಗಳಲ್ಲಿ ಪರಸ್ಪರ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ತದನಂತರ ಪತ್ನಿಯು ತನ್ನ ಮಾಸಿಕ ಖರ್ಚುಗಳಿಗಾಗಿ ಪತಿಯಿಂದ ಜೀವನಾಂಶ ಕೊಡಿಸಬೇಕೆಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು ಪತ್ನಿಯ ಪರವಾಗಿ ₹20,000 ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದಾಯದ ತಾರತಮ್ಯ ಪರಿಗಣಿಸಿದ ಹೈಕೋರ್ಟ್ ಹೈಕೋರ್ಟ್‌ನಲ್ಲಿ ನಡೆದ ಸುದೀರ್ಘ ವಿಚಾರಣೆಯ ವೇಳೆ ದಂಪತಿಗಳಿಬ್ಬರ ಅಧಿಕೃತ ಆದಾಯದ ವಿವರಗಳು ಲಭ್ಯವಾಗಿವೆ. ಪತಿಗೆ ಪ್ರತಿ ತಿಂಗಳು ₹60,646 ಸಂಬಳವಿದ್ದರೆ, ಆತನ ಪತ್ನಿಯು ಮಾಸಿಕ ₹1 ಲಕ್ಷಕ್ಕೂ ಅಧಿಕ ವೇತನ ಪಡೆಯುತ್ತಿರುವುದು ದೃಢಪಟ್ಟಿದೆ.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು, ಪತಿಗಿಂತಲೂ ಹೆಚ್ಚು ಸಂಪಾದಿಸುವ ಪತ್ನಿಯು ತನ್ನ ಸ್ವಂತ ನಿರ್ವಹಣೆಯನ್ನು ತಾನೇ ಮಾಡಿಕೊಳ್ಳಲು ಸಂಪೂರ್ಣ ಶಕ್ತಳಾಗಿದ್ದಾಳೆ. ಸ್ವತಃ ಪತಿಯ ಆದಾಯವೇ ಆಕೆಗಿಂತ ಕಡಿಮೆ ಇರುವಾಗ ಮತ್ತು ಸದ್ಯಕ್ಕೆ ಆಕೆಗೆ ಮಕ್ಕಳ ಪಾಲನೆ ಸೇರಿದಂತೆ ಯಾವುದೇ ಹೆಚ್ಚುವರಿ ಕೌಟುಂಬಿಕ ಬಾಧ್ಯತೆಗಳು ಇಲ್ಲದಿರುವುದರಿಂದ ಪತಿಯು ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ. ಕೌಟುಂಬಿಕ ನ್ಯಾಯಾಲಯದ ಆದೇಶ ಕಾನೂನುಬದ್ಧವಾಗಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅದನ್ನು ರದ್ದುಪಡಿಸುವ ಮೂಲಕ ಪತಿಗೆ ದೊಡ್ಡ ರಿಲೀಫ್ ನೀಡಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post