ಉದಯಪುರ ಬಳಿಕ ಪಿಂಕ್ ಸಿಟಿ ಜೈಪುರಕ್ಕೂ ಬೆಂಗಳೂರಿನಿಂದ ನೇರ ವಿಮಾನ ಸಂಚಾರ ಆರಂಭ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಗುಲಾಬಿ ನಗರ ಜೈಪುರಕ್ಕೆ ಪ್ರವಾಸ ಅಥವಾ ವ್ಯಾಪಾರ – ವಹಿವಾಟಿಗೆ ತೆರಳುವ ಕನ್ನಡಿಗರಿಗೆ ಒಂದು ಶುಭ ಸುದ್ದಿ ಇದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ‘ಆಕಾಶ ಏರ್’ ಮುಂಬರುವ ಅಕ್ಟೋಬರ್ 11, 2026 ರಿಂದ ಬೆಂಗಳೂರು ಮತ್ತು ಜೈಪುರ ನಡುವೆ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ.

ತನ್ನ ದೇಶೀಯ ಜಾಲವನ್ನು ವಿಸ್ತರಿಸುತ್ತಿರುವ ಆಕಾಶ ಏರ್‌ ಪಾಲಿಗೆ ಜೈಪುರ 29ನೇ ತಾಣವಾಗಿದೆ. ರಾಜಸ್ಥಾನದ ಪ್ರಮುಖ ಪ್ರವಾಸಿ ಮತ್ತು ವಾಣಿಜ್ಯ ಕೇಂದ್ರವಾಗಿರುವ ಜೈಪುರವನ್ನು, ಭಾರತದ ಐಟಿ ರಾಜಧಾನಿ ಬೆಂಗಳೂರು ಹಾಗೂ ಆರ್ಥಿಕ ರಾಜಧಾನಿ ಮುಂಬೈಗೆ ಬೆಸೆಯುವ ನಿಟ್ಟಿಲ್ಲಿ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ.

ಬೆಂಗಳೂರಿನ ಪ್ರಯಾಣಿಕರಿಗೆ ಡಬಲ್ ಧಮಾಕಾ!

ಬೆಂಗಳೂರಿನ ಟೆಕ್ಕಿಗಳಿಗೆ, ಉದ್ಯಮಿಗಳಿಗೆ ಹಾಗೂ ಪ್ರವಾಸಿಗರಿಗೆ ರಾಜಸ್ಥಾನ ಪ್ರವಾಸ ಈಗ ಮತ್ತಷ್ಟು ಸುಲಭವಾಗಲಿದೆ. ಬೆಂಗಳೂರಿನಿಂದ ನೇರವಾಗಿ ಜೈಪುರಕ್ಕೆ ಅಕ್ಟೋಬರ್ 11 ರಿಂದ ಸೇವೆ ಆರಂಭವಾಗುತ್ತಿದ್ದರೆ, ಅಕ್ಟೋಬರ್ 15 ರಿಂದ ಬೆಂಗಳೂರಿನಿಂದ ರಾಜಸ್ಥಾನದ ಮತ್ತೊಂದು ಸುಂದರ ನಗರವಾದ ಉದಯಪುರಕ್ಕೂ ವಿಮಾನ ಸೇವೆಗಳು ಶುರುವಾಗಲಿವೆ.

ಬೆಂಗಳೂರು – ಜೈಪುರ ವಿಮಾನದ ವೇಳಾಪಟ್ಟಿ (ಪ್ರತಿದಿನ)

* ಬೆಂಗಳೂರಿನಿಂದ ಜೈಪುರಕ್ಕೆ (QP 1529): ಬೆಳಗ್ಗೆ 08:20ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ ಬೆಳಗ್ಗೆ 10:50ಕ್ಕೆ ಜೈಪುರ ತಲುಪಲಿದೆ.
* ಜೈಪುರದಿಂದ ಬೆಂಗಳೂರಿಗೆ (QP 1530): ಬೆಳಗ್ಗೆ 11:30ಕ್ಕೆ ಜೈಪುರದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ 2:00 ಗಂಟೆಗೆ ಬೆಂಗಳೂರು ತಲುಪಲಿದೆ.
ಮುಂಬೈ – ಜೈಪುರ ವಿಮಾನದ ವೇಳಾಪಟ್ಟಿ (ಪ್ರತಿದಿನ)
* ಮುಂಬೈನಿಂದ ಜೈಪುರಕ್ಕೆ (QP 1153): ಬೆಳಗ್ಗೆ 09:10ಕ್ಕೆ ಮುಂಬೈನಿಂದ ಹೊರಡಲಿರುವ ವಿಮಾನ ಬೆಳಗ್ಗೆ 11:10ಕ್ಕೆ ಜೈಪುರ ತಲುಪಲಿದೆ.
* ಜೈಪುರದಿಂದ ಮುಂಬೈಗೆ (QP 1154): ಮಧ್ಯಾಹ್ನ 12:00ಕ್ಕೆ ಜೈಪುರದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ 1:55 ಗಂಟೆಗೆ ಮುಂಬೈ ತಲುಪಲಿದೆ.

ಟಿಕೆಟ್ ಬುಕ್ಕಿಂಗ್ ಆರಂಭ

ಈ ಹೊಸ ಮಾರ್ಗದ ವಿಮಾನಗಳ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಪ್ರಯಾಣಿಕರು ಆಕಾಶ ಏರ್‌ನ ಅಧಿಕೃತ ವೆಬ್‌ಸೈಟ್, ಆ್ಯಪ್‌ಗಳು ಹಾಗೂ ಇತರ ಪ್ರಮುಖ ಟಿಕೆಟ್ ಬುಕ್ಕಿಂಗ್ ಏಜೆನ್ಸಿಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

ಈ ಹೊಸ ಸೇವೆಯ ಬಗ್ಗೆ ಮಾತನಾಡಿರುವ ಆಕಾಶ ಏರ್‌ನ ಸಹ ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, “ಜೈಪುರಕ್ಕೆ ವಿಮಾನ ಸೇವೆ ಆರಂಭಿಸುತ್ತಿರುವುದು ನಮ್ಮ ದೇಶೀಯ ನೆಟ್‌ವರ್ಕ್ ವಿಸ್ತರಣೆಯ ಮತ್ತೊಂದು ಮೈಲಿಗಲ್ಲಾಗಿದೆ. ರಾಜಸ್ಥಾನವು ನಮಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ಆರ್ಥಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳನ್ನು ಪಿಂಕ್ ಸಿಟಿಯೊಂದಿಗೆ ಸಂಪರ್ಕಿಸಲು ನಾವು ಉತ್ಸುಕರಾಗಿದ್ದೇವೆ. ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ವಿಶ್ವಾಸಾರ್ಹ ಅನುಭವ ನೀಡುವುದು ನಮ್ಮ ಬದ್ಧತೆಯಾಗಿದೆ,” ಎಂದು ಭರವಸೆ ನೀಡಿದ್ದಾರೆ.

ಆಗಸ್ಟ್ 2022 ರಲ್ಲಿ ಆರಂಭವಾಗಿ ಇದುವರೆಗೆ ಬರೋಬ್ಬರಿ 29 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿರುವ ‘ಆಕಾಶ ಏರ್’, ತನ್ನ ವಿಶಿಷ್ಟ ಸೌಲಭ್ಯಗಳಿಂದ ಗಮನ ಸೆಳೆಯುತ್ತಿದೆ. ಆರಾಮದಾಯಕ ಪ್ರಯಾಣ, ಚಾರ್ಜಿಂಗ್ ಸೌಲಭ್ಯ, ಕೆಫೆ ಆಕಾಶ ಮೂಲಕ ರುಚಿಕರ ಊಟ ಸಂಸ್ಥೆಯ ವಿಶೇಷತೆಯಾಗಿವೆ.

ಒಟ್ಟಿನಲ್ಲಿ, ಮುಂಬರುವ ದಸರಾ – ದೀಪಾವಳಿ ರಜೆಗಳಲ್ಲಿ ರಾಜಸ್ಥಾನದತ್ತ ಪ್ರವಾಸ ಬೆಳೆಸುವ ಪ್ಲ್ಯಾನ್‌ನಲ್ಲಿರುವ ಕನ್ನಡಿಗರಿಗೆ ಆಕಾಶ ಏರ್‌ನ ಈ ಹೊಸ ಸೇವೆ ಹೇಳಿ ಮಾಡಿಸಿದಂತಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others