PhD ವಿದ್ಯಾರ್ಥಿನಿ ಜೊತೆ ಅಕ್ರಮ ಸಂಬಂಧ ಆರೋಪ; ಕರ್ನಾಟಕ ವಿವಿ ಪ್ರೊಫೆಸರ್ ತಂಗುದೊರೈ ಸಸ್ಪೆಂಡ್!

ಧಾರವಾಡ: ಸಂಶೋಧನಾ ವಿದ್ಯಾರ್ಥಿನಿಯೊಂದಿಗೆ ದೈಹಿಕ ಹಾಗೂ ಅನೈತಿಕ ಸಂಬಂಧ ಹೊಂದಿದ ಗಂಭೀರ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ (KUD) ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ತಂಗುದೊರೈ ಅವರನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಆಡಳಿತ ಮಂಡಳಿಯು ಸೇವೆಯಿಂದ ಅಮಾನತುಗೊಳಿಸಿ ಬುಧವಾರ ಅದೇಶ ಹೊರಡಿಸಿದೆ.

ವಿಶ್ವವಿದ್ಯಾಲಯದ ಮುಖ್ಯ ಕಚೇರಿ ಮುಂಭಾಗದಲ್ಲಿ ಎಬಿವಿಪಿ (ABVP) ಕಾರ್ಯಕರ್ತರು ಹಮ್ಮಿಕೊಂಡಿದ್ದ ಉಗ್ರ ಪ್ರತಿಭಟನೆ ಹಾಗೂ ಆಕ್ರೋಶದ ಬಳಿಕ ಕವಿವಿ ಆಡಳಿತ ಈ ಕಠಿಣ ಕ್ರಮ ಜರುಗಿಸಿದೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ ಸೃಷ್ಟಿಯಾದ ವಿವಾದ:

ದೂರಿನ ಅನ್ವಯ, ಪ್ರೊ. ತಂಗುದೊರೈ ತಮ್ಮ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಅಧ್ಯಯನ ಮಾಡುತ್ತಿದ್ದ ಯುವತಿಯೊಂದಿಗೆ ಆಪ್ತ ಸಂಬಂಧ ಬೆಳೆಸಿದ್ದರು. ಇವರಿಬ್ಬರ ಕೆಲವು ಖಾಸಗಿ ಭಾವಚಿತ್ರಗಳು ಇನ್‌ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರಿಂದ ಮನನೊಂದ ವಿದ್ಯಾರ್ಥಿನಿ ಸಂಶೋಧನೆಯನ್ನು ಮಧ್ಯದಲ್ಲೇ ನಿಲ್ಲಿಸಿ ಊರಿಗೆ ಮರಳಿದ್ದಾಳೆ. ಆದಾಗ್ಯೂ, ಆಕೆಯನ್ನು ಮತ್ತೆ ವಿಶ್ವವಿದ್ಯಾಲಯಕ್ಕೆ ಕರೆತರುವಂತೆ ವಿಭಾಗದ ಇತರ ವಿದ್ಯಾರ್ಥಿಗಳ ಮೇಲೆ ಈ ಪ್ರಾಧ್ಯಾಪಕ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಕಚೇರಿ ಒಳಗೆ ನುಗ್ಗಲು ಯತ್ನ: ರಣರಂಗವಾದ ಕವಿವಿ ಆವರಣ

ಈ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಬುಧವಾರ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದರು. ಸಿಟ್ಟಿಗೆದ್ದ ಪ್ರತಿಭಟನಾಕಾರರು ಕಚೇರಿ ಮುಂಭಾಗದ ಹೂವಿನ ಕುಂಡಗಳನ್ನು ಪುಡಿಪುಡಿ ಮಾಡಿ ಆಕ್ರೋಶ ಹೊರಹಾಕಿದರು.

ಕೆಲವರು ಕುಲಪತಿಗಳ ಕೊಠಡಿಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಭಾರಿ ನೂಕಾಟ-ತಳ್ಳಾಟ ನಡೆದು, ಕವಿವಿ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಆರ್ಡರ್ ಕಾಪಿ ಸಿಗುವವರೆಗೂ ಧರಣಿ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕುಲಪತಿಗಳು ತುರ್ತು ಸಭೆ ನಡೆಸಿ ಶಿಸ್ತುಕ್ರಮದ ಭರವಸೆ ನೀಡಿದರೂ, “ಅಮಾನತು ಆದೇಶದ ಪ್ರತಿ ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ” ಎಂದು ವಿದ್ಯಾರ್ಥಿಗಳು ಕಚೇರಿ ಮುಂದೆಯೇ ಕುಳಿತು ಪಟ್ಟು ಹಿಡಿದರು. ಅಂತಿಮವಾಗಿ ಅಧಿಕೃತ ಸಸ್ಪೆನ್ಷನ್ ಆರ್ಡರ್ ಬಿಡುಗಡೆಯಾದ ಬಳಿಕವೇ ಹೋರಾಟ ಶಾಂತವಾಯಿತು.

ತನಿಖೆಗೆ ವಿಶೇಷ ಸಮಿತಿ ರಚನೆ:

ಘಟನೆ ಕುರಿತು ಮಾಹಿತಿ ನೀಡಿರುವ ಕುಲಪತಿ ಪ್ರೊ. ಎ.ಎಂ. ಖಾನ್,

“ಆರೋಪಿತ ಪ್ರಾಧ್ಯಾಪಕ ದೇವರಾಜನ್ ತಂಗುದೊರೈ ಅವರನ್ನು ಅಮಾನತುಗೊಳಿಸಲಾಗಿದೆ. ಈ ಇಡೀ ಪ್ರಕರಣದ ಆಳವಾದ ವಿಚಾರಣೆಗಾಗಿ ತಜ್ಞರ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ವರದಿ ಬಂದ ತಕ್ಷಣವೇ ಕಾನೂನುಬದ್ಧವಾಗಿ ಮುಂದಿನ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.”

ಇದೇ ವೇಳೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಖಾತ್ರಿಪಡಿಸಲು ಈ ಕಾಮುಕ ಪ್ರಾಧ್ಯಾಪಕನ ವಿರುದ್ಧ ಕೇವಲ ಇಲಾಖಾ ಕ್ರಮ ಸಾಲದು, ತಕ್ಷಣವೇ ಪೊಲೀಸ್ ತನಿಖೆ ನಡೆಸಿ ಜೈಲಿಗಟ್ಟಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿವೆ.

Share it :

Leave a Reply

Your email address will not be published. Required fields are marked *