ಅದಿತ್ಯ ರಾಜ್ ಕ್ಯಾಪಿಟಲ್ಸ್ ಸೇಲ್ಸ್ ಹೆಡ್‌ಗೆ ಬಿಗ್ ರಿಲೀಫ್: ಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರು!

ಬೆಂಗಳೂರು: ಸಾರ್ವಜನಿಕರನ್ನು ಕೋಟ್ಯಂತರ ರೂಪಾಯಿ ಹೂಡಿಕೆ ಜಾಲಕ್ಕೆ ಸೆಳೆದು ವಂಚಿಸಿದ ಆರೋಪ ಎದುರಿಸುತ್ತಿರುವ ‘ಆದಿತ್ಯ ರಾಜ್ ಕ್ಯಾಪಿಟಲ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ (National Sales Head) ಸಂದೀಪ್ ಗಿರಿಧರ್ ಅವರಿಗೆ ರಾಜಧಾನಿಯ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಬುಧವಾರ ಆದೇಶಿಸಿದೆ.

ಲಾಭಾಂಶದ ಆಮಿಷವೊಡ್ಡಿ ಜನರಿಂದ ಬರೋಬ್ಬರಿ 211 ಕೋಟಿ ರೂಪಾಯಿ ಸಂಗ್ರಹಿಸಿದ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಇವರಿಗೆ, ಬಂಧನದಿಂದ ಪಾರಾಗಲು ಈ ಆದೇಶ ನೆರವಾಗಿದೆ.

ತಲೆಮರೆಸಿಕೊಂಡಿದ್ದ ಆಡಳಿತ ಮಂಡಳಿ

ತಿಂಗಳಿಗೆ ಶೇಕಡಾ 5 ರಷ್ಟು ಭಾರಿ ಬಡ್ಡಿ ಮತ್ತು ನಿಶ್ಚಿತ ಠೇವಣಿ ಆದಾಯದ ಭರವಸೆ ನೀಡಿ ಸಂಸ್ಥೆಯು ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿತ್ತು. ಬೆಳಗಾವಿಯ ಪ್ರಖ್ಯಾತ ‘ಶಿವಂ ಅಸೋಸಿಯೇಟ್ಸ್’ ಹಗರಣ ಬಯಲಾದ ಬೆನ್ನಲ್ಲೇ ಈ ಸಂಸ್ಥೆಯ ಅಕ್ರಮಗಳೂ ಚರ್ಚೆಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಬೀವುಲ್ಲಾ ಕೆ. ಅವರು ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಂಪನಿಯ ಬ್ಯಾಂಕ್ ಅಕೌಂಟ್‌ಗಳನ್ನು ಫ್ರೀಜ್ ಮಾಡಿ, ಕಚೇರಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಕಾನೂನು ಕ್ರಮ ಜರುಗುತ್ತಿದ್ದಂತೆ ಕಂಪನಿಯ ಪ್ರಮುಖರು ನಾಪತ್ತೆಯಾಗಿದ್ದರು. ಸದ್ಯ ಪ್ರಕರಣದ ತೀವ್ರತೆಯಿಂದಾಗಿ ಇದನ್ನು ಸಿಐಡಿ (CID) ತನಿಖೆಗೆ ವಹಿಸಲಾಗಿದ್ದು, ಸದ್ಯ ಸಿಐಡಿ ತನಿಖೆ ಪ್ರಗತಿಯಲ್ಲಿದೆ.

‘ಕೋರ್ಟ್‌ನಲ್ಲಿ’ ನಡೆದಿದ್ದೇನು?

ಬಂಧನ ಭೀತಿಯಲ್ಲಿದ್ದ ಸಂದೀಪ್ ಗಿರಿಧರ್ ಪರವಾಗಿ ‘ಮಾತೃ ಲಾ ಫರ್ಮ್’ನ ವಕೀಲರಾದ ಬಿ. ಸಿದ್ದೇಶ್ವರ ಹಾಗೂ ರವಿ ಅವರು ನ್ಯಾಯಾಧೀಶರ ಮುಂದೆ ಗಟ್ಟಿ ವಾದ ಮಂಡಿಸಿದರು.

“ಅರ್ಜಿದಾರರು ಕೇವಲ ಸಂಬಳ ಪಡೆಯುವ ಉದ್ಯೋಗಿಯಾಗಿದ್ದು, ಹೂಡಿಕೆ ನಿರ್ಧಾರಗಳಿಗೂ ಅವರಿಗೂ ಸಂಬಂಧವಿಲ್ಲ. ಕಳೆದ 6 ವರ್ಷಗಳಿಂದ ಕಂಪನಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಯಾರೂ ವಂಚನೆ ದೂರು ನೀಡಿಲ್ಲ. ಕೇವಲ ಇಲಾಖಾ ಅಧಿಕಾರಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ತನಿಖಾಧಿಕಾರಿಗಳ ವಿಚಾರಣೆಗೆ ನಮ್ಮ ಕಕ್ಷಿದಾರರು ಪೂರ್ಣ ಸಹಕಾರ ನೀಡಲಿದ್ದಾರೆ” ಎಂದು ವಕೀಲರು ಪ್ರತಿಪಾದಿಸಿದರು.

ಸರ್ಕಾರಿ ವಕೀಲರಿಲ್ಲದೆ ಸರಳವಾದ ಹಾದಿ!

ವಿಶೇಷ ನ್ಯಾಯಾಲಯಕ್ಕೆ ಸರ್ಕಾರದ ವತಿಯಿಂದ ಅಧಿಕೃತ ಅಭಿಯೋಜಕರು (Government Prosecutor) ನೇಮಕವಾಗದ ಕಾರಣ, ಈ ಜಾಮೀನು ಅರ್ಜಿಗೆ ಸರ್ಕಾರದ ಕಡೆಯಿಂದ ಯಾವುದೇ ಆಕ್ಷೇಪಣೆ ದಾಖಲಾಗಲಿಲ್ಲ. ಪ್ರತಿವಾದದ ಅನುಪಸ್ಥಿತಿಯಲ್ಲಿ ಅರ್ಜಿದಾರರ ಪರ ವಕೀಲರ ವಾದಾಂಶಗಳನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಬಾಲಚಂದ್ರ ಅವರು, ಆರೋಪಿಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಅರ್ಜಿ ಇತ್ಯರ್ಥಪಡಿಸಿದರು.

Share it :

Leave a Reply

Your email address will not be published. Required fields are marked *