ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಬಿಜೆಪಿ-ಜೆಡಿಎಸ್‌ ಒಂದಾಗಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಬಿಜೆಪಿ-ಜೆಡಿಎಸ್‌ ಒಂದಾಗಿ ಹೋರಾಟ ಮಾಡಲಿದೆ. ಜೆಡಿಎಸ್‌ನಿಂದ ನಡೆಯಲಿರುವ ಪಾದಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾನು ಕೂಡ ಭಾಗವಹಿಸಲಿದ್ದೇನೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿಯಲ್ಲಿ ಟೌನ್‌ಶಿಪ್‌ ಹೆಸರಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಒಂದಾಗಿ ಹೋರಾಟ ನಡೆಸಲು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಲಾಗಿದೆ. ಜೆಡಿಎಸ್‌ ನಾಯಕರಾದ ನಿಖಿಲ್‌ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಭಾನುವಾರ ಆರಂಭವಾಗಲಿರುವ ಪಾದಯಾತ್ರೆಯಲ್ಲಿ ನಾವು ಕೂಡ ಭಾಗವಹಿಸಲಿದ್ದೇವೆ. ಬಿಜೆಪಿ ಕಾರ್ಯಕರ್ತರು ಕೂಡ ಇದರಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಬಿಜೆಪಿ ವತಿಯಿಂದ ಈಗಾಗಲೇ ಹೋರಾಟ ನಡೆಸಲಾಗಿದೆ. ಮುಂದೆ ಅಧಿವೇಶನ ನಡೆಯುವ ಸಮಯದಲ್ಲಿ ಜೆಡಿಎಸ್‌-ಬಿಜೆಪಿ ಒಂದಾಗಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದ ಹೋರಾಟಗಳು ಕೂಡ ಒಂದಾಗಿ ನಡೆಯಲಿದೆ ಎಂದು ತಿಳಿಸಿದರು.

ಬರಗಾಲ, ನೈಸ್‌, ಬಿಡದಿ ಟೌನ್‌ಶಿಪ್‌, ಕೆಪಿಎಸ್‌ಸಿ ಭ್ರಷ್ಟಾಚಾರ ಮೊದಲಾದ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು. ಇದಕ್ಕೆ ಜೆಡಿಎಸ್‌ ಸಂಪೂರ್ಣ ಸಹಕಾರ ನೀಡಲಿದೆ. ಮುಂದೆಯೂ ಪ್ರಮುಖವಾದ ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಲಿದ್ದೇವೆ. ಕೇಂದ್ರದ ಬಿಜೆಪಿ ನಾಯಕರನ್ನು ಈಗಾಗಲೇ ಭೇಟಿ ಮಾಡಿದ್ದು, ಎರಡೂ ಪಕ್ಷಗಳ ಸಮನ್ವಯಕ್ಕಾಗಿ ಸಮಿತಿ ರಚನೆಯಾಗಲಿದೆ. ಇದರಲ್ಲಿ ಎರಡೂ ಕಡೆಯಿಂದ ಐದು ಸದಸ್ಯರು ಇರಲಿದ್ದಾರೆ. ಚುನಾವಣೆಯೂ ಸಮೀಪ ಇರುವುದರಿಂದ ಎಲ್ಲ ಸಂದರ್ಭದಲ್ಲಿ ಒಂದಾಗಿ ಹೋಗಲು ನಿರ್ಧರಿಸಲಾಗಿದೆ ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others