ಬೆಂಗಳೂರು: ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ (Train Maintenance Depot) ನಿರ್ಮಾಣಕ್ಕಾಗಿ ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ (Bi-RIDE) ಟೆಂಡರ್ ಆಹ್ವಾನಿಸಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯ (BSTP) ಮಹತ್ವದ ಮೈಲಿಗಲ್ಲಾಗಿರುವ ಈ ನಿರ್ವಹಣಾ ಘಟಕದ ಟೆಂಡರ್ಗೆ ಜಿಎಸ್ಟಿ (GST) ಹೊರತುಪಡಿಸಿ ₹200.03 ಕೋಟಿ ನಿಗದಿಪಡಿಸಲಾಗಿದೆ. ಹಾಗೆಯೇ, ಈ ಟೆಂಡರ್ ಕಾಮಗಾರಿಗೆ ಬಿಡ್ ಸಲ್ಲಿಸಲು ಆಗಸ್ಟ್ 12, 2026 ಕಡೆಯ ದಿನಾಂಕವಾಗಿದೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ICF) 153 ಬೋಗಿಗಳ (Coaches) ಪೂರೈಕೆಗಾಗಿ 2026ರ ಮೇ 06 ರಂದು ಕಾರ್ಯಾದೇಶ (Work order) ನೀಡಿದ ಬೆನ್ನಲ್ಲೇ, ಈ ನೂತನ ರೈಲುಗಳ ಸಮರ್ಪಕ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಈ ಡೆಪೊವನ್ನು ನಿರ್ಮಿಸಲಾಗುತ್ತಿದೆ. ಚಿಕ್ಕಬಾಣಾವರ ಉಪನಗರ ರೈಲು ನಿಲ್ದಾಣದ ಸಮೀಪ ನಿರ್ಮಾಣವಾಗಲಿರುವ ಈ ಘಟಕವು ಕಾರಿಡಾರ್ 2 ಮತ್ತು ಕಾರಿಡಾರ್ 4 ರ ರೈಲುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆ ಹೊರಲಿದೆ. ಈ ಬೃಹತ್ ಯೋಜನೆಗಾಗಿ ಈಗಾಗಲೇ 26 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
“ಯಾವುದೇ ಉತ್ತಮ ಉಪನಗರ ರೈಲು ಜಾಲಕ್ಕೆ ಅತ್ಯಾಧುನಿಕ ರೈಲು ನಿರ್ವಹಣಾ ಘಟಕವು ಹೃದಯವಿದ್ದಂತೆ. ಇತ್ತೀಚೆಗಷ್ಟೇ 153 ಅತ್ಯಾಧುನಿಕ ಬೋಗಿಗಳಿಗೆ ಆರ್ಡರ್ ನೀಡಲಾಗಿದ್ದು, ಅವುಗಳ ನಿಯಮಿತ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆಗೆ ಅಗತ್ಯವಿರುವ ವಿಶ್ವದರ್ಜೆಯ ಕಾರ್ಯಾಗಾರವನ್ನು (Workshop) ಸೋಲದೇವನಹಳ್ಳಿ ಡೆಪೊ ಒದಗಿಸಲಿದೆ. ಬೆಂಗಳೂರಿನ ಜನತೆಗೆ ಉತ್ತಮ ಹಾಗೂ ಹೈ ಪ್ರೀಕ್ವೆನ್ಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಉಪನಗರ ಸಾರಿಗೆಯನ್ನು ಒದಗಿಸುವ ಕಾರ್ಯತಂತ್ರದ ಭಾಗವಾಗಿದೆ,” ಎಂದು Bi-RIDE ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಲಕ್ಷ್ಮಣ್ ಸಿಂಗ್ (IRS) ತಿಳಿಸಿದ್ದಾರೆ.
ಒಂದು ಅತ್ಯುತ್ತಮ ವರ್ಕ್ಶಾಪ್ ಆಗಿ ರೂಪುಗೊಳ್ಳಲಿರುವ ಈ ಡೆಪೊದಲ್ಲಿ, ಸ್ಟೇಬ್ಲಿಂಗ್ ಲೈನ್ಗಳು (Stabling lines), ವರ್ಕ್ಶಾಪ್ ಲೈನ್ಗಳು, ಇನ್ಸ್ಪೆಕ್ಷನ್ ಬೇ (Inspection bay), ರಿಪೇರಿ ಬೇ ಮತ್ತು ಸಂಪೂರ್ಣ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸೌಲಭ್ಯಗಳು ಇರಲಿವೆ. ಈ ಅಗತ್ಯ ಸೌಲಭ್ಯಗಳಿಲ್ಲದೆ ಉಪನಗರ ರೈಲು ವ್ಯವಸ್ಥೆಯು ನಿರೀಕ್ಷಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪರಿಸರ ಕಾಳಜಿಯೊಂದಿಗೆ Bi-RIDE ನ ‘ನೆಟ್-ಝೀರೋ ಕಾರ್ಬನ್’ ನೀತಿಗೆ ಅನುಗುಣವಾಗಿ, ಈ ಘಟಕದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ.
ಜರ್ಮನಿಯ KfW ಡೆವಲಪ್ಮೆಂಟ್ ಬ್ಯಾಂಕ್ (KfW Development Bank) ಮಂಜೂರು ಮಾಡಿರುವ ಸಾಲದ ನೆರವಿನಿಂದ ಈ ಅತ್ಯಾಧುನಿಕ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಇದು ಬೆಂಗಳೂರಿಗರಿಗೆ ಸುರಕ್ಷಿತ, ಆಧುನಿಕ ಹಾಗೂ ಸುಸ್ಥಿರ ಪ್ರಯಾಣದ ಅನುಭವವನ್ನು ನೀಡುವ ದೀರ್ಘಕಾಲೀನ ದೃಷ್ಟಿಕೋನವನ್ನು ಹೊಂದಿದೆ.





