ಚಿಕ್ಕಬಳ್ಳಾಪುರ: ಮೋಟಿವೇಶ್ ಸ್ಪೀಚ್‌ಗೆ ಪ್ರಸಿದ್ಧಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್ ಒಂದಿಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಹಾಕಿಕೊಂಡಿರುತ್ತಲೇ ಇರುತ್ತಾರೆ. ಇದೀಗ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದಿದ್ದಾರೆ.
ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿ ಚಪ್ಪಲಿ ಎಸೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಈ ವಿಚಾರದ ಬಗ್ಗೆ ಇದೀಗ ಎಸ್‌ಪಿ ಕುಶಾಲ್ ಚೌಕ್ಸಿ ಮಾತನಾಡಿದ್ದಾರೆ, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಉಳಿದ ಎಲ್ಲ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು, ಗದ್ದಲ ಮತ್ತು ಗಲಾಟೆಯಲ್ಲಿ ಸುಮಾರು 100 ರಿಂದ 150 ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇಲಾಖೆಯ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಎಸ್‌ಪಿ, ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಸಮರ್ಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ಪೊಲೀಸರ ಯಾವುದೇ ವೈಫಲ್ಯ ಇಲ್ಲದಿದ್ದು. ಖಾಕಿ ತಮ್ಮ ಕರ್ತವ್ಯವನ್ನು ಮಾಡಿದೆ ಎಂದಿದ್ದಾರೆ.
ಈ ಘಟನೆ ಕುರಿತು ವಿವರಿಸಿದ ಅವರು, ಇದೊಂದು ಉದ್ದೇಶಪೂರ್ವಕವಾಗಿ ಶಾಸಕರಿಗೆ ಅವಮಾನ ಮಾಡುವ ಯತ್ನವಾಗಿದ್ದು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಅವರ ಕೃತ್ಯಕ್ಕೆ ತಕ್ಕಂತೆ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಸೇರಿದಂತೆ ವಿವಿಧ ಜಾತಿ-ಸಮುದಾಯದ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಆದರೆ, ಗದ್ದಲ ಎಬ್ಬಿಸಿದವರು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕರ್ತರೋ ಅಥವಾ ಸಾಮಾನ್ಯ ಜನರೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಯಾರೇ ಇದ್ದರೂ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಸ್‌ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.





