ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿಯವರು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಪನಿರ್ದೇಶಕರಾಗಿ (Deputy Director) ಇಲ್ಲಿ ಇಂದು ಅಧಿಕೃತವಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.
ಇದೇ ವರ್ಷ ಜೂನ್ 18 ರಂದು (ಇಂದು) ಅವರು ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರ ಕಚೇರಿಯ ತಮ್ಮ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದರು. ಅಲ್ಲಿಂದ ನೇರವಾಗಿ ಶಿವಮೊಗ್ಗಕ್ಕೆ ಆಗಮಿಸಿದ ಅವರು, ತಮ್ಮ ನೂತನ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಅಧಿಕಾರಿಗಳು ಹಾಗೂ ಗಣ್ಯರಿಂದ ಶುಭ ಹಾರೈಕೆ: ಸಿ.ಎಸ್. ಷಡಾಕ್ಷರಿಯವರು ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಸುಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಗಣ್ಯರು ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ, ಪುಷ್ಪಗುಚ್ಛ ನೀಡಿ ಅಭಿನಂದಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಆರ್. ಮೋಹನ್ ಕುಮಾರ್, ಕಾರ್ಯದರ್ಶಿಗಳಾದ ಆರ್. ಪಾಪಣ್ಣ, ಪ್ರಮುಖರಾದ ರಂಗನಾಥ್, ನರಸಿಂಹಮೂರ್ತಿ, ವೇಣುಗೋಪಾಲ್, ಪ್ರಸನ್ನ ಕುಮಾರ್, ದಿನೇಶ್, ಮಹೇಶ್ ಸೇರಿದಂತೆ ಇಲಾಖೆಯ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.





