ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಜವಾದ ಮುಖ ಹಾಗೂ ನಮ್ಮ ಮಾತೃಭೂಮಿಯ ಬಗ್ಗೆ ಅದರ ಸಂಪೂರ್ಣ ಅಗೌರವವನ್ನು ನೋಡಿ, ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ಪತ್ರ ಬರೆದು, ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಾರೋಹಣ ಮಾಡುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಇದು ನಮ್ಮ ಸಂವಿಧಾನಕ್ಕೆ ಸಂಪೂರ್ಣ ಅವಮಾನ ಮತ್ತು ಕೋಟ್ಯಂತರ ಭಾರತೀಯರಿಗೆ ನೇರ ಅಪಮಾನ. ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷದ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದನ್ನು ಸಚಿವರೊಬ್ಬರು ಹೇಗೆ ಸಮರ್ಥಿಸಿಕೊಳ್ಳಬಹುದೇ ಎಂದು ಕೇಳಿದ್ದಾರೆ.

ಸಚಿವ ಜಮೀರ್ ಮತ್ತು ಕರ್ನಾಟಕ ಕಾಂಗ್ರೆಸ್‌ಗೆ ರಾಜಕೀಯ ಅಧಿಕಾರ, ಚುನಾವಣಾ ಕಾರ್ಯತಂತ್ರ ಹಾಗೂ ಪಕ್ಷದ ನಿಷ್ಠೆ ರಾಷ್ಟ್ರದ ಹೆಮ್ಮೆ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪವಿತ್ರ ತ್ರಿವರ್ಣ ಧ್ವಜಕ್ಕಿಂತಲೂ ಸದಾ ಮುಖ್ಯವಾಗಿರುವಂತೆ ಕಾಣುತ್ತಿದೆ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಮನವಿಗೆ ನೀಡಿರುವ ಕಾರಣವೇನು? ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಮುಂಬರುವ ವಿಧಾನಸಭಾ ಉಪಚುನಾವಣೆಗಳು ಹಾಗೂ ಪಕ್ಷದ ಆಂತರಿಕ ರಾಜಕೀಯ ಚಟುವಟಿಕೆಗಳ ಮೇಲೆ ಗಮನಹರಿಸಬೇಕಿರುವುದರಿಂದ ತಮ್ಮ ಬಳಿ ಸಮಯವಿಲ್ಲ ಎಂದು ಅವರು ಹೇಳಿದ್ದಾರೆ.
ಇಂತಹ ಅಹಂಕಾರಿ ಮತ್ತು ರಾಷ್ಟ್ರವಿರೋಧಿ ಮನೋಭಾವ ಕಾಂಗ್ರೆಸ್ ಸಂಸ್ಕೃತಿಯಲ್ಲೇ ಆಳವಾಗಿ ಬೇರೂರಿದೆ. ಪಕ್ಷದ ನಾಯಕರು ಚುನಾವಣಾ ಲೆಕ್ಕಾಚಾರಗಳಿಗೆ ದೇಶದ ಸ್ವಾತಂತ್ರ್ಯವನ್ನು ಗೌರವಿಸುವುದಕ್ಕಿಂತ ಹೆಚ್ಚಿನ ಆದ್ಯತೆ ನೀಡಿದಾಗ, ಅವರ ನಿಜವಾದ ನಿಷ್ಠೆ ಎಲ್ಲಿದೆ ಎಂಬುದು ಬಹಿರಂಗವಾಗುತ್ತದೆ. ರಾಷ್ಟ್ರಧ್ವಜವನ್ನು ಎರಡನೇ ಆದ್ಯತೆಯಾಗಿ ಪರಿಗಣಿಸುವ ಸಚಿವರು ಇನ್ನು ಒಂದು ಕ್ಷಣವೂ ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಮತ್ತು ಸಾಂವಿಧಾನಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದರು.
ರಾಜ್ಯಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ತ್ರಿವರ್ಣ ಧ್ವಜಕ್ಕಿಂತ ಪಕ್ಷದ ಅಧಿಕಾರಕ್ಕೆ ಆದ್ಯತೆ ನೀಡಿದ ಆರೋಪಕ್ಕೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವು ಕರ್ನಾಟಕದ ಜನತೆ ಹಾಗೂ ಇಡೀ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಹೇಳುತ್ತಾರೆ.
ಅಶೋಕ್ ಎಕ್ಸ್ ಖಾತೆಯ ಪೋಸ್ಟ್ ಹೀಗಿತ್ತು ನೋಡಿ:

ಸಚಿವ ಜಮೀರ್ ಅಹಮದ್ ಖಾನ್ ದೇಶದ್ರೋಹಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣ ಮತ್ತೊಮ್ಮೆ ನಡುರಸ್ತೆಯಲ್ಲಿ ಬಯಲಾಗಿದೆ!
ವಿಜಯನಗರ ಜಿಲ್ಲೆಯಲ್ಲಿ ಆಗಸ್ಟ್ 15ರ ಪವಿತ್ರ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ನನಗೆ ‘ಸಮಯವಿಲ್ಲ’, ಹಾಗಾಗಿ ಅದರಿಂದ ವಿನಾಯಿತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ @BZZameerAhmedK ಅವರು ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ! ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಮತ್ತು ಪಕ್ಷದ ಸಂಘಟನೆಯಲ್ಲಿ ಬ್ಯುಸಿಯಾಗಿದ್ದೇನೆ ಎಂಬುದು ಇವರು ನೀಡಿರುವ ಲಜ್ಜೆಗೆಟ್ಟ ನೆಪ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು ಈ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಿಗೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷ ರಾಜಕೀಯವೇ ದೊಡ್ಡದಾಯಿತೇ? ಸಚಿವ ಜಮೀರ್ ಮತ್ತು ಈ ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರದ ಹೆಮ್ಮೆ, ನಮ್ಮ ಕ್ರಾಂತಿಕಾರಿಗಳ ಬಲಿದಾನ ಮತ್ತು ಪವಿತ್ರ ತ್ರಿವರ್ಣ ಧ್ವಜಕ್ಕಿಂತ ಅಧಿಕಾರದ ದಾಹ ಹಾಗೂ ಚುನಾವಣಾ ಲೆಕ್ಕಾಚಾರಗಳೇ ಮೊದಲ ಆದ್ಯತೆಯಾಗಿದೆ.
ಈ ಅಹಂಕಾರ ಮತ್ತು ರಾಷ್ಟ್ರವಿರೋಧಿ ಮನಸ್ಥಿತಿ @INCIndia ಸಂಸ್ಕೃತಿಯಲ್ಲೇ ರಕ್ತಗತವಾಗಿದೆ. @RahulGandhi ಅವರ ನೇತೃತ್ವದಲ್ಲಿ ಇಂತಹ ದೇಶದ್ರೋಹಿ ಧೋರಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲ ಸಿಗುತ್ತಿದೆ. ದೇಶದ ಸ್ವಾತಂತ್ರ್ಯೋತ್ಸವಕ್ಕಿಂತ ಚುನಾವಣಾ ತಂತ್ರವೇ ಮುಖ್ಯ ಎನ್ನುವ ನಾಯಕರಿಗೆ ಈ ಮಣ್ಣಿನ ಮೇಲಿರುವ ನಿಷ್ಠೆ ಎಂಥದ್ದು ಎಂಬುದು ಈಗ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಿದೆ.
ರಾಷ್ಟ್ರಧ್ವಜ ಹಾರಿಸುವುದನ್ನೂ ಒಂದು ‘ಹೊರೆ’ ಎಂದು ಭಾವಿಸುವ ಇಂತಹ ಸಚಿವರಿಗೆ ಸರ್ಕಾರದಲ್ಲಿ ಮುಂದುವರಿಯುವ ನೈತಿಕ ಮತ್ತು ಸಾಂವಿಧಾನಿಕ ಅರ್ಹತೆಯೇ ಇಲ್ಲ.ಮುಖ್ಯಮಂತ್ರಿ @DKShivakumar ಅವರೇ, ನಿಮಗೆ ಕಿಂಚಿತ್ತಾದರೂ ದೇಶಪ್ರೇಮ ಅನ್ನೋದು ಇದ್ದರೆ ಈ ಕೂಡಲೇ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾ ಮಾಡಿ! ದೇಶಕ್ಕಿಂತ ಪಕ್ಷದ ಅಧಿಕಾರವೇ ಮುಖ್ಯ ಎಂದು ಭಾವಿಸಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವು ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು.





