ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಪ್ರಕಟಿಸುವ ಮೂಲಕ ತಮ್ಮ ಸುದೀರ್ಘ ರಾಜಕೀಯ ಪಯಣಕ್ಕೆ ಪ್ರಮುಖ ತಿರುವು ನೀಡಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಆಯೋಜಿಸಲಾಗಿದ್ದ ದಿವಂಗತ ಕೆ.ಆರ್.ಪೇಟೆ ಕೃಷ್ಣ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ತಾವು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ಕನಿಷ್ಠ 10 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವಂತೆ ಕಾರ್ಯಕ್ರಮದಲ್ಲಿದ್ದ ಅಭಿಮಾನಿಗಳು ಒತ್ತಾಯಿಸಿದರಾದರೂ, ಸಿದ್ದರಾಮಯ್ಯ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು. ಈ ಮೂಲಕ ತಮ್ಮ ಚುನಾವಣಾ ಸ್ಪರ್ಧೆಗೆ ತೆರೆ ಬೀಳಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಎರಡನೇ ಅವಧಿಯ ಆಡಳಿತದ ಅಂತ್ಯ:
ಇತ್ತೀಚೆಗಷ್ಟೇ (ಮೇ 28) ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ನಾಯಕ ರಾಹುಲ್ ಗಾಂಧಿಯವರ ಸಂದೇಶಕ್ಕೆ ಗೌರವ ನೀಡಿ ಅವರು ಹುದ್ದೆ ತೊರೆದಿದ್ದರಿಂದ, ಅವರ ಎರಡನೇ ಅವಧಿಯ ಆಡಳಿತ ಅಂತ್ಯಗೊಂಡಿತ್ತು. ಐದು ದಶಕಗಳ ಸುದೀರ್ಘ ಹಾಗೂ ಧಣಿವರಿಯದ ಹೋರಾಟದ ಹಾದಿಯಲ್ಲಿ ಸಾಗಿದ ಅವರ ಈ ನಡೆ ರಾಜ್ಯ ರಾಜಕಾರಣದ ಪ್ರಮುಖ ಘಟ್ಟವೊಂದಕ್ಕೆ ಭಾವುಕ ಮುಕ್ತಾಯ ಹಾಡಿತ್ತು.
ಸಾಮಾಜಿಕ ನ್ಯಾಯದ ಹರಿಕಾರ:
ಮೈಸೂರಿನ ಮಣ್ಣಿನಲ್ಲಿ ಬೆಳೆದು ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ ಅವರು ಅಧಿಕಾರ, ಹಿನ್ನಡೆ ಹಾಗೂ ತ್ಯಾಗಗಳನ್ನು ಹತ್ತಿರದಿಂದ ಕಂಡ ಅಪರೂಪದ ನಾಯಕ. ಅಧಿಕಾರದಿಂದಷ್ಟೇ ಅಲ್ಲದೆ ತಮ್ಮ ಜನಪರ ಹೋರಾಟಗಳಿಂದಲೇ ಬೆಳೆದ ಅವರು, ಕೇವಲ ಒಬ್ಬ ರಾಜಕಾರಣಿಯಾಗಿ ಉಳಿ ಯದೆ ನಿರ್ದಿಷ್ಟ ವರ್ಗದ ಧ್ವನಿಯಾಗಿ, ಸಮಾಜದ ಆತ್ಮಗೌರವದ ಸಂಕೇತವಾಗಿ ಗುರುತಿಸಿಕೊಂಡವರು. ಹಿಂದುಳಿದ ವರ್ಗಗಳ ರಾಜಕೀಯ ಭಾಷೆಗೆ ಹೊಸ ಆಯಾಮ ನೀಡಿದ ಅವರು, ಡಿ. ದೇವರಾಜ ಅರಸು ಅವರು ರೂಪಿಸಿದ ಶಕ್ತಿಯ ಸಮೀಕರಣವನ್ನು ‘ಸಾಮಾಜಿಕ ನ್ಯಾಯದ ಯುದ್ಧ’ವನ್ನಾಗಿ ಪರಿವರ್ತಿಸಿದರು.
ಅವರ ಈ ಚುನಾವಣಾ ರಾಜಕೀಯ ನಿವೃತ್ತಿಯ ತೀರ್ಮಾನವು ಅವರ ಅಪಾರ ಅಭಿಮಾನಿ ಬಳಗ ಹಾಗೂ ಬೆಂಬಲಿತರಲ್ಲಿ ತೀವ್ರ ಬೇಸರ ಮೂಡಿಸಿದೆ.





