ಬೆಂಗಳೂರು: ಸಂಬಳಕ್ಕಾಗಿ ಸಾರಿಗೆ ನೌಕರರು ಪ್ರತಿಭ್ರಟನೆ ಮಾಡುತ್ತಿದ್ದು, ಸರ್ಕಾರದ ಮುಂದೆ ಕೆಲ ಬೇಡಿಕೆಗಳನ್ನು ಇಡುತ್ತಿದ್ದರು. ಸಂಬಳಕ್ಕೆ ಬೇಸತ್ತಿದ್ದ ಸಾರಿಗೆ ನೌಕರರಿಗೆ ಇದೀಗ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಹೌದು ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಇದೇ ತಿಂಗಳಿನಿಂದ ಸಾರಿಗೆ ನೌಕರರ ಮೂಲ ವೇತನ ಜಾಸ್ತಿಯಾಗಲಿದ್ದು, ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಮತ್ತು ಕೆಕೆಆರ್‌ಟಿಸಿ ನೌಕರರ ಮೂಲ ವೇತನವನ್ನು 12.5%ರಷ್ಟು ಜಾಸ್ತಿ ಮಾಡಿದೆ.
ಈಗಾಗಲೇ ನೌಕರರಿಗೆ ಪಾವತಿಸಬೇಕಿದ್ದ ಹಳೆಯ ವೇತನ ಹಿಂಬಾಕಿಯ ಮೊದಲ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಜುಲೈ ತಿಂಗಳ ವೇತನದಲ್ಲಿ ಪರಿಷ್ಕೃತ ವೇತನ ಜಾರಿಗೆ ಬರುವಂತೆ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಹೊಸ ವೇತನ ಪರಿಷ್ಕರಣೆಯು 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ.
ಇದರಿಂದ ಸರ್ಕಾರಕ್ಕೆ ತಿಂಗಳಿಗೆ ಹೆಚ್ಚುವರಿಯಾಗಿ 72.80 ಕೋಟಿ ರೂ. ವೆಚ್ಚವಾಗಲಿದ್ದು, ಈ ಹೆಚ್ಚಳದಿಂದಾಗಿ ರಾಜ್ಯದ ಸುಮಾರು 1.05 ಲಕ್ಷ ಸಾರಿಗೆ ನೌಕರರಿಗೆ ಅನುಕೂಲವಾಗಲಿದೆ.
ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆದೇಶಿಸಿದ್ರು. ಈ ತಿಂಗಳಿನಿಂದ ಸಾರಿಗೆ ನೌಕರರ ಅಕೌಂಟ್‌ಗೆ ಪರಿಷ್ಕೃತ ವೇತನ ಜಮೆಯಾಗಲಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಸಂಬಳ ವಿಚಾರಕ್ಕೆ ಸುಸ್ತಾಗಿದ್ದ ಸಾರಿಗೆ ನೌಕರರು ಈ ಆದೇಶದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.




