ರಾಜ್ಯದಲ್ಲಿ ಆಶ್ರಯ ಯೋಜನೆಯಡಿ ಮನೆ ಹಂಚಿಕೆಗೆ ಹರಾಜು ಪ್ರಕ್ರಿಯೆ ರದ್ದು, ಲಾಟರಿ ಸಿಸ್ಟಂ ಜಾರಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಬೆಂಗಳೂರು: “ಸ್ವಂತದೊಂದು ಸೂರಿನ ಕನಸು ಹೊತ್ತು ವರ್ಷಗಳಿಂದ ಕಾಯುತ್ತಿರುವ ಬಡವರು ಹಾಗೂ ಮಧ್ಯಮ ವರ್ಗದವರ ತಾಳ್ಮೆಯನ್ನು ಇನ್ನು ಹೆಚ್ಚು ಪರೀಕ್ಷಿಸಬೇಡಿ. ಈಗಾಗಲೇ ಮುಂಗಡ ಹಣ ಪಾವತಿಸಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಆದಷ್ಟು ಬೇಗ ಮನೆಗಳನ್ನು ಹಂಚಿಕೆ ಮಾಡಿ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.

ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಸತಿ ಇಲಾಖೆಯ ಸಮಗ್ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ವಸತಿ ಯೋಜನೆಗಳು ಹಾಗೂ ನಿವೇಶನ ಹಂಚಿಕೆ ಪ್ರಕ್ರಿಯೆಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಆದೇಶಿಸಿದರು.

ಹಣವಂತರಿಗಲ್ಲ, ಅರ್ಹರಿಗಷ್ಟೇ ಸಿಗಲಿ ಮನೆ

ಸಭೆಯಲ್ಲಿ ವಸತಿ ಸಂಸ್ಥೆಗಳ ಹಂಚಿಕೆ ನೀತಿಗಳ ಬಗ್ಗೆ ಪರಾಮರ್ಶಿಸುವಾಗ ಸಿಎಂ, “ಮನೆಗಳನ್ನು ಹರಾಜು ಹಾಕುವ ಪದ್ಧತಿಯಿಂದ ಶ್ರೀಮಂತರು ಲಾಭ ಪಡೆಯುತ್ತಾರೆಯೇ ಹೊರತು ನಿಜವಾದ ನಿರ್ಗತಿಕರಿಗೆ ಆಶ್ರಯ ಸಿಗುತ್ತದೆಯೇ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಸೂಕ್ತ ಉತ್ತರವಿಲ್ಲದೆ ಅಧಿಕಾರಿಗಳು ಮೌನಕ್ಕೆ ಶರಣಾದಾಗ, ಹರಾಜು ಪ್ರಕ್ರಿಯೆಯನ್ನು ತಕ್ಷಣದಿಂದಲೇ ರದ್ದುಗೊಳಿಸುವಂತೆ ಸೂಚಿಸಿದರು. ಇದರ ಬದಲಿಗೆ ಸಾರ್ವಜನಿಕರ ಸಮ್ಮುಖದಲ್ಲೇ ಲಾಟರಿ ಎತ್ತುವ ವಿಧಾನದ ಮೂಲಕ ಅತ್ಯಂತ ಪಾರದರ್ಶಕವಾಗಿ ಮನೆಗಳನ್ನು ಹಂಚಬೇಕು ಮತ್ತು ನೈಜ ಫಲಾನುಭವಿಗಳಿಗೆ ಮಾತ್ರ ಈ ಸವಲತ್ತು ತಲುಪುವಂತೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆದೇಶಿಸಿದರು.

ಮುಂಬೈ ಮಾದರಿಯ ‘ಸ್ಲಂ ಮುಕ್ತ’ ಯೋಜನೆಗೆ ಮುನ್ನುಡಿ

ಖಾಲಿ ನಿವೇಶನಗಳನ್ನು ಹಂಚುವುದರಿಂದ ಮುಂದಿನ ದಿನಗಳಲ್ಲಿ ಅಲ್ಲಿ ಮತ್ತೆ ಕೊಳಚೆ ಪ್ರದೇಶಗಳು (ಸ್ಲಂ) ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಬಡವರಿಗೆ ಬರಿ ನಿವೇಶನ ಕೊಡುವ ಬದಲು ಸುಸಜ್ಜಿತ ಮನೆಗಳನ್ನೇ ನಿರ್ಮಿಸಿಕೊಡಲು ಒತ್ತು ನೀಡಬೇಕು ಎಂದು ಸಿಎಂ ತಿಳಿಸಿದರು. ಮಹಾರಾಷ್ಟ್ರದ ಮುಂಬೈನಲ್ಲಿ ಯಶಸ್ವಿಯಾಗಿರುವ ಸ್ಲಂ ಮರು ಅಭಿವೃದ್ಧಿ ಮಾದರಿಯನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಸೂಚಿಸಿದ ಅವರು, “ನಮ್ಮ ಅಧಿಕಾರಿಗಳ ತಂಡ ಮುಂಬೈಗೆ ಭೇಟಿ ನೀಡಿ ಅಲ್ಲಿನ ವಸತಿ ಸಂಕೀರ್ಣಗಳನ್ನು ಅಧ್ಯಯನ ಮಾಡಬೇಕು. ಆದರೆ, ನಾವಿಲ್ಲಿ ನಿರ್ಮಿಸುವ ಮನೆಗಳು ಮುಂಬೈಗಿಂತ ವಿಸ್ತಾರವಾಗಿ ಮತ್ತು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕು. ಈ ಕುರಿತ ಸಮಗ್ರ ಕ್ರಿಯಾ ಯೋಜನೆಯನ್ನು ಮುಂದಿನ ಸಚಿವ ಸಂಪುಟ ಸಭೆಯೊಳಗೆ ಮಂಡಿಸಬೇಕು,” ಎಂದು ಗಡುವು ವಿಧಿಸಿದರು.

ವರ್ಷಗಳಿಂದ ಧೂಳು ಹಿಡಿಯುತ್ತಿರುವ ಅರ್ಜಿಗಳ ವಿಲೇವಾರಿ

ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಫೋಟೋ ಇರುವ ಅರ್ಜಿಗಳು ಮತ್ತು ಅದಕ್ಕಾಗಿ ಬಡವರು ಕಟ್ಟಿರುವ ಠೇವಣಿ ಹಣ ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, “ಪಾಪ, ಬಡ ಜನ್ಮಗಳು ಒಂದು ಮನೆಗಾಗಿ ಇಷ್ಟೊಂದು ವರ್ಷ ಕಾಯಬೇಕೇ? ತಕ್ಷಣವೇ ಆ ಹಳೆಯ ಅರ್ಜಿಗಳನ್ನು ಪರಿಶೀಲಿಸಿ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಿ,” ಎಂದರು. ವಸತಿ ರಹಿತರ ಪಟ್ಟಿಯನ್ನು ಶೀಘ್ರವಾಗಿ ಆಖೈರುಗೊಳಿಸಲು ತಾವು ಶಾಸಕರುಗಳೊಂದಿಗೆ ಸ್ವತಃ ಚರ್ಚಿಸುವುದಾಗಿ ತಿಳಿಸಿದ ಅವರು, ಗ್ರಾಮೀಣ ಭಾಗದಿಂದ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು ಹಾಗೂ ಬಡವರು ನಿವಾಸಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಬೇಕು ಎಂದು ಸೂಚಿಸಿದರು.

ಕೆಎಚ್‌ಬಿ ಬಾಕಿ ಯೋಜನೆಗಳಿಗೆ ಚಾಲನೆ, ಬಿಡಿಎಗೆ ಹೊಸ ಜವಾಬ್ದಾರಿ

ಕರ್ನಾಟಕ ಗೃಹ ಮಂಡಳಿ (KHB) ಮಂಜೂರು ಮಾಡಿರುವ 568 ಯೋಜನೆಗಳ ಪೈಕಿ 288 ಯೋಜನೆಗಳು ಇನ್ನು ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ, ಈ ಎಲ್ಲಾ ಅಡೆತಡೆಗಳನ್ನು ತಕ್ಷಣವೇ ನಿವಾರಿಸಿ ಕಾಮಗಾರಿ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದರು. ಇಲಾಖೆಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಮ್ಮ ಗಮನಕ್ಕೆ ತರಬೇಕು ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ, ಡಾ. ಶಿವರಾಮ ಕಾರಂತ ಬಡಾವಣೆಯ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳ ನಿರ್ಮಾಣದ ಸಂಪೂರ್ಣ ಉಸ್ತುವಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊನೆಯದಾಗಿ, ವಸತಿ ಯೋಜನೆಗಳನ್ನು ಆರಂಭಿಸುವ ಮುನ್ನವೇ ಸೂಕ್ತ ಮಾರುಕಟ್ಟೆ ಮತ್ತು ಬೇಡಿಕೆಯ ಸ್ಪಷ್ಟ ಯೋಜನೆ ಹೊಂದಿರಬೇಕು ಹಾಗೂ ಕೇವಲ ಕಟ್ಟಡ ಕಟ್ಟಿದರೆ ಸಾಲದು, ಅಲ್ಲಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದ ಸಿಎಂ, ಸಂಡೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಲಾದ ಮನೆಗಳ ಗುಣಮಟ್ಟವನ್ನು ಪ್ರಶಂಸಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others