ಬಿಜೆಪಿಗೆ ಸ್ವಲ್ಪವಾದರೂ ನಾಚಿಕೆಯಿದ್ದಿದ್ದರೆ, ಅವರು ಆಗಲೇ ಸ್ವತಂತ್ರ ತನಿಖೆಗೆ ಆದೇಶಿಸುತ್ತಿದ್ದರು: ಮೋದಿ, ಶಾಗೆ ಪ್ರಿಯಾಂಕ್ ಖರ್ಗೆ ಟಾಂಗ್‌

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆತೀವ್ರ ವಾಗ್ದಾಳಿ ನಡೆಸಿದ್ದಾರೆ, ‘ವಂದೇ ಮಾತರಂ’ ಕುರಿತಾದ ವಿವಾದವು ತುರ್ತು ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕ್ರಮದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸೃಷ್ಟಿಸಲಾದ ಉದ್ದೇಶಪೂರ್ವಕ ತಂತ್ರವಾಗಿದೆ’ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್‌ ಬಳಕೆ ಕುರಿತು ಎಫ್‌ಐಆರ್ ದಾಖಲಿಸಲು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಎಂಟು ಗಂಟೆಗಳ ಕಾಲ ಧರಣಿ ನಡೆಸಬೇಕಾದ ಪರಿಸ್ಥಿತಿ ಎದುರಾದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬಿಜೆಪಿಗೆ ಸ್ವಲ್ಪವಾದರೂ ನಾಚಿಕೆಯಿದ್ದಿದ್ದರೆ, ಅವರು ಆಗಲೇ ಸ್ವತಂತ್ರ ತನಿಖೆಗೆ ಆದೇಶಿಸುತ್ತಿದ್ದರು ಆದರೆ ಅವರು ತಪ್ಪು ಮಾಡಿದವರಾಗಿರುವುದರಿಂದ ಅವರಿಗೆ ಅದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸದ್ಯಕ್ಕೆ ಅಮಿತ್ ಶಾ ಮತ್ತು ಮೋದಿ ಅವರು ಎಷ್ಟು ವಿಚಲಿತರಾಗಿದ್ದಾರೆಂದರೆ, ಸಂಸತ್ತಿಗೆ ಬಂದು ಉತ್ತರಿಸುವ ಧೈರ್ಯವನ್ನೂ ಅವರು ತೋರಲಿಲ್ಲ. ಇನ್ನು ಎಫ್‌ಐಆರ್ ದಾಖಲಿಸುವ ಮಾತೆಲ್ಲಿ ಬಂತು?’ ಎಂದು ಅವರು ಹೇಳಿದರು.

ಲೋಚಬ್ ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ನಡೆಸಿದ ಧರಣಿ ನಡೆಸಿದ ನಂತರ, ಶುಕ್ರವಾರ ಸಂಜೆ ದೆಹಲಿ ಪೊಲೀಸರು ಅಂತಿಮವಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118 ಮತ್ತು 125 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರು.

ಜುಲೈ 20 ರಂದು ಕನ್ನಾಟ್ ಪ್ಲೇಸ್‌ನಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ಗಾಯಗೊಂಡಿದ್ದರೂ, ತನ್ನ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದರು. ತಾವು ಏಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ತಮ್ಮ ದೃಷ್ಟಿಶಕ್ತಿಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿಕೊಂಡಿದ್ದರು.

‘ಪೆಲೆಟ್ ಗನ್ ಮೂಲಕ ಗುಂಡು ಹಾರಿಸಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಾಡಲು ವಿರೋಧ ಪಕ್ಷದ ನಾಯಕರು ಸತತ ಎಂಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದು ಅತ್ಯಂತ ದುರದೃಷ್ಟಕರ ಎಂದರು.

ದೆಹಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಮನುಷ್ಯನಿಗೆ ನ್ಯಾಯ ಪಡೆಯಲು ಅವಕಾಶವಿಲ್ಲದಿರುವುದು ವಿಷಾದನೀಯ. ಕೇವಲ ದೂರು ದಾಖಲಿಸಲು ರಾಹುಲ್ ಗಾಂಧಿಯವರ ಮಧ್ಯಪ್ರವೇಶದ ಅಗತ್ಯವಿದ್ದರೆ, ಅಶ್ರುವಾಯು ಮತ್ತು ಪೆಲೆಟ್ ಗನ್ ದಾಳಿಗೆ ಒಳಗಾದ ಸಾಮಾನ್ಯ ನಾಗರಿಕರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ’ ಎಂದು ಹೇಳಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others