ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವರ್ಷ ಸೆಪ್ಟೆಂಬರ್ನಲ್ಲಿ ಜಾರಿಗೆ ಬಂದಿದ್ದ ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆ್ಯಕ್ಟ್ ಅಡಿಯಲ್ಲಿ ಪ್ರಮುಖ ನಿರ್ಬಂಧಗಳು, ವ್ಯಾಪಾರ ನಿರ್ಬಂಧಗಳು ಮತ್ತು ಸುಂಕ ನಿಯಮಗಳಿಗೆ ವಿನಾಯಿತಿ ನೀಡಿ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.
ರಷ್ಯಾದ ಇಂಧನದ ಪ್ರಮುಖ ಖರೀದಿದಾರ ರಾಷ್ಟ್ರಗಳಾದ ಭಾರತ ಮತ್ತು ಚೀನಾಗಳು, ಇತರ ದೇಶಗಳ ಮೇಲಿನ ವ್ಯಾಪಾರ ದಂಡಾತ್ಮಕ ಕ್ರಮಗಳ ಅಮಾನತಿನಿಂದ ಲಾಭ ಪಡೆಯುವ ಸಾಧ್ಯತೆಯಿದೆ.
ರಷ್ಯಾದೊಂದಿಗೆ ವಾಣಿಜ್ಯ ಸಂಬಂಧ ಮುಂದುವರಿಸುವುದರಿಂದ ಉಂಟಾಗಬಹುದಾಗಿದ್ದ ಹೆಚ್ಚುವರಿ ವೆಚ್ಚವನ್ನು ಏರಿಸುವ ಮತ್ತು ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಪಡಿಸುವ ಬೆದರಿಕೆಯನ್ನು ಪ್ರಸ್ತಾವಿತ ಸುಂಕಗಳು ಹೊಂದಿದ್ದವು.
ಈ ವಿನಾಯಿತಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇಂಧನ ಪೂರೈಕೆಯನ್ನು ಕಾಯ್ದುಕೊಳ್ಳಲು ಮತ್ತು ಹೆಚ್ಚುವರಿ ವ್ಯಾಪಾರ ವೆಚ್ಚದ ಅಪಾಯವನ್ನು ತಗ್ಗಿಸಲು ನೆರವಾಗಬಹುದು. ಆದರೆ, ಅಮೆರಿಕ ಆಡಳಿತವು ಭವಿಷ್ಯದಲ್ಲಿ ಈ ನಿರ್ಬಂಧಗಳನ್ನು ಮತ್ತೆ ಜಾರಿಗೆ ತರುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಈ ಮೂಲಕ ರಷ್ಯಾದ ಇಂಧನವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಮೇಲೆ ವಿಧಿಸಬಹುದಾಗಿದ್ದ ಶೇ. 100ರವರೆಗಿನ ಸುಂಕ ಸೇರಿದಂತೆ ದಂಡನಾತ್ಮಕ ಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದಾರೆ.
ಕಾಯ್ದೆಯಲ್ಲಿರುವ ರಾಷ್ಟ್ರೀಯ ಹಿತಾಸಕ್ತಿ ಆಧಾರಿತ ವಿನಾಯಿತಿ ನಿಬಂಧನೆಯನ್ನು ಟ್ರಂಪ್ ಬಳಸಿಕೊಂಡಿದ್ದಾರೆ. ನಿರ್ದಿಷ್ಟ ಕ್ರಮಗಳನ್ನು ಅಮಾನತುಗೊಳಿಸುವುದು ಅಮೆರಿಕದ ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ಅಗತ್ಯವಾಗಿದೆ ಎಂದು ಅವರು ಕಾಂಗ್ರೆಸ್ಗೆ ಪ್ರಮಾಣೀಕರಿಸಿದ್ದಾರೆ.
ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೂ ಮುನ್ನ ಅಮೆರಿಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಬ್ಲೂಮ್ಬರ್ಗ್ ಮತ್ತು ರಾಯಿಟರ್ಸ್ ವರದಿಗಳ ಪ್ರಕಾರ, ಇಂಧನ ಮಾರುಕಟ್ಟೆಯ ಮೇಲಿನ ಒತ್ತಡ ಕಡಿಮೆ ಮಾಡುವುದು ಮತ್ತು ಇಂಧನ ವೆಚ್ಚವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಆಡಳಿತ ಈ ನಿರ್ಧಾರ ಕೈಗೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪೂರೈಕೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟ್ರಂಪ್ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವರದಿಗಳೂ ಈ ಬೆಳವಣಿಗೆಯ ಬೆನ್ನಲ್ಲೇ ಬಂದಿವೆ. ಈ ಒಪ್ಪಂದದಡಿ ರಷ್ಯಾ ಲಕ್ಷಾಂತರ ಟನ್ ಡೀಸೆಲ್ ನ್ನು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಅವಕಾಶ ದೊರೆಯಲಿದೆ ಎನ್ನಲಾಗಿದೆ.
ಉಕ್ರೇನ್ ಯುದ್ಧ ಮುಂದುವರಿದಿರುವ ಸಂದರ್ಭದಲ್ಲಿಯೇ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರುವ ವಿಚಾರದಲ್ಲಿ ವಾಷಿಂಗ್ಟನ್ನ ನಿಲುವಿನಲ್ಲಿ ಬದಲಾವಣೆಯಾಗಿರುವುದನ್ನು ಈ ನಿರ್ಧಾರ ಸೂಚಿಸುತ್ತದೆ. ಇದರಿಂದ ರಷ್ಯಾದ ಇಂಧನ ವ್ಯಾಪಾರದ ಮೇಲಿನ ನಿರ್ಬಂಧಗಳು ಸಡಿಲಗೊಳ್ಳುವ ಸಾಧ್ಯತೆಯಿದೆ.
ಈ ಕ್ರಮಗಳು ಜಾರಿಗೆ ಬರಲು ಕೆಲವೇ ದಿನಗಳು ಬಾಕಿ ಇರುವಾಗ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳಿಗೆ ಇದರಿಂದ ಗಮನಾರ್ಹ ಆರ್ಥಿಕ ಪರಿಹಾರ ದೊರೆಯುವ ಸಾಧ್ಯತೆಯಿದೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಆ ದೇಶದ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ರಷ್ಯಾದ ಇಂಧನವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳು ಹಾಗೂ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ನೆರವಾಗುತ್ತಿವೆ ಎಂದು ಆರೋಪಿಸಲಾದ ರಾಷ್ಟ್ರಗಳನ್ನು ಈ ಕಾಯ್ದೆ ಗುರಿಯಾಗಿಸಿಕೊಂಡಿತ್ತು.





