ಕೆಂಪು ದೀಪಕ್ಕೆ ನಿಲ್ಲೋಣ, ಹಸಿರು ಬರುವವರೆಗೆ ಕಾಯೋಣ! ಇಂದು ಅಂತರರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

“ಅವಸರ ಬಿಟ್ಟು ತಾಳ್ಮೆ ಇಟ್ಟುಕೊಂಡು, ಸುರಕ್ಷಿತವಾಗಿ ಮನೆ ಸೇರೋಣ!”ಇದು ಇಂದಿನ ಅಂತರರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನದ ಸಂದೇಶ. ಪ್ರತಿ ವರ್ಷ ಆಗಸ್ಟ್ 5 ರಂದು ಜಗತ್ತಿನಾದ್ಯಂತ ಟ್ರಾಫಿಕ್ ಸಿಗ್ನಲ್‌ನ ಮಹತ್ವವನ್ನು ನೆನಪಿಸಿಕೊಳ್ಳಲಾಗುತ್ತದೆ. ರಸ್ತೆಯಲ್ಲಿ ನಮ್ಮ ಜೀವನವನ್ನು ನಿಯಂತ್ರಿಸುವ ಆ ಮೂರು ಬಣ್ಣದ ದೀಪಗಳಿಲ್ಲದಿದ್ದರೆ ಊಹಿಸಿಕೊಳ್ಳಿ, ನಗರದ ರಸ್ತೆಗಳು ಯುದ್ಧ ಭೂಮಿಯಂತಾಗುತ್ತವೆ.

ಇತಿಹಾಸದ ಹಿನ್ನೆಲೆ :ವಿಶ್ವದ ಮೊದಲ ವಿದ್ಯುತ್ ಟ್ರಾಫಿಕ್ ಲೈಟ್ 1914 ರ ಆಗಸ್ಟ್ 5 ರಂದು ಅಮೆರಿಕದ ಕ್ಲೀವ್‌ಲ್ಯಾಂಡ್ ನಗರದಲ್ಲಿ ಅಳವಡಿಸಲಾಯಿತು. ಕೆಂಪು ಮತ್ತು ಹಸಿರು ಎಂಬ ಎರಡೇ ಬಣ್ಣಗಳಿದ್ದ ಆ ಸಿಗ್ನಲ್ ಇಂದು ಮೂರು ಬಣ್ಣಗಳೊಂದಿಗೆ ಇಡೀ ಜಗತ್ತಿನ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿದೆ. ಅದರ ನೆನಪಿಗಾಗಿಯೇ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ಬಣ್ಣಗಳ ಭಾಷೆ ಜೀವನದ ಪಾಠ ಟ್ರಾಫಿಕ್ ಲೈಟ್ ಕೇವಲ ಲೋಹದ ಕಂಬವಲ್ಲ. ಅದು ನಮಗೆ ಜೀವನದ ಪಾಠ ಹೇಳುವ ಗುರು. 1.ಕೆಂಪು ದೀಪ – ನಿಲ್ಲು, ಯೋಚಿಸು. ಕೆಂಪು ದೀಪಕ್ಕೆ ನಿಲ್ಲೋಣ” ಎನ್ನುವುದು ಕೇವಲ ನಿಯಮವಲ್ಲ. ಅದು ತಾಳ್ಮೆಯ ಪಾಠ. ಇವತ್ತು ನಮ್ಮ ಯುವಕರಲ್ಲಿ ಹೆಚ್ಚುತ್ತಿರುವ “ಸಿಗ್ನಲ್ ಜಂಪ್” ದುರಭ್ಯಾಸಕ್ಕೆ ಇದು ಉತ್ತರ. “ಮಾಡಿ ಗೆಲ್ಲೋಕೆ ಇದೇನು ರೇಸ್ ಅಲ್ಲ, ಇದು ನಮ್ಮ ಜೀವನ” ಎಂಬಂತೆ, 30 ಸೆಕೆಂಡ್ ಕಾಯಲು ಆಗದೇ ಮಾಡುವ ಒಂದು ತಪ್ಪು ಇಡೀ ಕುಟುಂಬದ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತದೆ. 2025ರಲ್ಲಿ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಶೇ.18 ರಷ್ಟು ಸಿಗ್ನಲ್ ಉಲ್ಲಂಘನೆಯಿಂದಲೇ ಸಂಭವಿಸಿವೆ ಎಂದು ಟ್ರಾಫಿಕ್ ಪೊಲೀಸ್ ಅಂಕಿಅಂಶ ಹೇಳುತ್ತದೆ.

2.ಹಳದಿ ದೀಪ – ಎಚ್ಚರಿಕೆ, ನಿಧಾನ: ಹಳದಿ ಎಂದರೆ “ಸಿದ್ಧನಾಗು”. ಇದು ನಮಗೆ ಕಲಿಸುವುದು ಮುಂದಾಲೋಚನೆ. ರಸ್ತೆಯಲ್ಲಿ ಮಾತ್ರವಲ್ಲ, ಜೀವನದಲ್ಲೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ವಲ್ಪ ನಿಧಾನವಾಗಿ, ಯೋಚಿಸಿ ಮುಂದೆ ಹೋಗಬೇಕು.

3.ಹಸಿರು ದೀಪ – ಹೋಗು, ಆದರೆ ಜವಾಬ್ದಾರಿಯಿಂದ. ಹಸಿರು ಬಂದ ತಕ್ಷಣ ವೇಗವಾಗಿ ಹೋಗುವುದು ಸರಿಯಲ್ಲ. “ಸ್ವಲ್ಪ ಅವಸರ ಕಡಿಮೆ ಮಾಡಿ, ಟ್ರಾಫಿಕ್ ನಿಯಮಗಳನ್ನು ಫಾಲೋ ಮಾಡಿ” ಎಂಬ ಸಂದೇಶ ಇದರಲ್ಲಿದೆ. ಪಾದಚಾರಿಗೆ ದಾರಿ ಕೊಡುವುದು, ಲೇನ್ ಬದಲಾಯಿಸುವ ಮುನ್ನ ಇಂಡಿಕೇಟರ್ ಹಾಕುವುದು ಇವೆಲ್ಲವೂ ಹಸಿರು ದೀಪದ ಜವಾಬ್ದಾರಿ.

ಬೆಂಗಳೂರಿನ ವಾಸ್ತವ ಸಿಲಿಕಾನ್ ಸಿಟಿ ಎಂದು ಹೆಸರಾದ ನಮ್ಮ ಬೆಂಗಳೂರಿನಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ವಾಹನಗಳು ಓಡಾಡುತ್ತವೆ. ಇಂತಹ ಸಂದರ್ಭದಲ್ಲಿ ಟ್ರಾಫಿಕ್ ಲೈಟ್ ಇರೋದು “ನಮಗೆ ಫೈನ್ ಹಾಕೋಕೆ ಅಲ್ಲ, ನಮ್ಮ ಜೀವ ಉಳಿಸೋಕೆ” ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಐಟಿ ಕಾರಿಡಾರ್, ಸಿಲ್ಕ್ ಬೋರ್ಡ್, ಮೆಜೆಸ್ಟಿಕ್ ನಂತಹ ಜಂಕ್ಷನ್‌ಗಳಲ್ಲಿ ಸಿಗ್ನಲ್ ಇದ್ದರೂ ಜನರು ಕಿವಿಗೆ ಮೊಬೈಲ್ ಇಟ್ಟುಕೊಂಡು, ಹೆಲ್ಮೆಟ್ ಇಲ್ಲದೆ, ಜೀಬ್ರಾ ಕ್ರಾಸ್ ಮಧ್ಯೆ ಬೈಕ್ ನಿಲ್ಲಿಸಿ ಅಪಘಾತಕ್ಕೆ ಆಹ್ವಾನ ಕೊಡುತ್ತಿದ್ದಾರೆ. “ಸಂಚಾರಿ ದೀಪಗಳನ್ನು ಗೌರವಿಸಿ, ಅನಾಹುತಗಳನ್ನು ತಪ್ಪಿಸಿ” ಎಂಬುದು ಕೇವಲ ಘೋಷಣೆಯಾಗಬಾರದು

ತಜ್ಞರ ಅಭಿಪ್ರಾಯ ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳುವಂತೆ, “ನಾವು ಚಲನ್ ಕತ್ತರಿಸಲು ಸಿಗ್ನಲ್ ಹಾಕಿಲ್ಲ. ಒಂದು ಅಪಘಾತವಾದರೆ ಅದರ ಹಿಂದೆ ನಾಲ್ಕು ಜನರ ಜೀವನ ಹಾಳಾಗುತ್ತದೆ. ಆಸ್ಪತ್ರೆ ಬಿಲ್, ಮಾನಸಿಕ ನೋವು, ಕುಟುಂಬದ ಜವಾಬ್ದಾರಿ ಇದೆಲ್ಲವನ್ನೂ ತಪ್ಪಿಸಲು ಒಂದು ನಿಮಿಷ ಕಾಯುವುದು ದೊಡ್ಡದೇನಲ್ಲ”.

ನಮ್ಮ ಜವಾಬ್ದಾರಿ ಏನು? ಈ ಅಂತರರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನದಂದು ನಾವು ಈ 3 ಸಂಕಲ್ಪ ಮಾಡೋಣ: 1.ಮನೆಯಿಂದಲೇ ಶುರು ಮಾಡಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಿಗ್ನಲ್ ನಿಯಮ ಕಲಿಸಿ. “ಕೆಂಪು ಎಂದರೆ ನಿಲ್ಲು, ಹಸಿರು ಎಂದರೆ ಹೋಗು” ಎಂದು ಆಟದ ಮೂಲಕ ಕಲಿಸಿ. 2.ಸ್ವಯಂ ಶಿಸ್ತುಪಾಲಿಸೋಣ “ನನ್ನಿಂದ ಯಾರಿಗೂ ತೊಂದರೆಯಾಗಬಾರದು” ಎಂಬ ಮನೋಭಾವ ಇಟ್ಟುಕೊಳ್ಳಿ. ಇತರರು ಜಂಪ್ ಮಾಡಿದರೂ ತಿಳಿಹೇಳಿ,ನಾವು ಎಂದು ರೂಲ್ಸ್ ಬ್ರೇಕ್ ಮಾಡಬಾರದು. 3.ಪಾದಚಾರಿಗೂ ಗೌರವಕೊಟ್ಟು ಕಾರು, ಬೈಕ್ ಇದ್ದವರಿಗೆ ಮಾತ್ರ ರಸ್ತೆಯಲ್ಲ. ಜೀಬ್ರಾ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುವವರಿಗೂ ಅವಕಾಶ ಕೊಡೋಣ.

ಸಮರ್ಪಣ ಟ್ರಸ್ಟ್ ಅಂತಾರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ಆಚರಿಸಿ ಒಂದು ತೀರ್ಮಾನಕ್ಕೆ ಬಂದಿದೆ. ಟ್ರಾಫಿಕ್ ಲೈಟ್ ನಮಗೆ ಹೇಳುವ ಕೊನೆಯ ಮಾತು ಒಂದೇ “ಜೀವನ ಒಂದು ಬಾರಿ. ಅದನ್ನು ಮರಳಿ ಪಡೆಯಲು ಆಗುವುದಿಲ್ಲ”. ಆದ್ದರಿಂದ ಇಂದಿನಿಂದ ಪ್ರತಿಜ್ಞೆ ಮಾಡೋಣ.ಅವಸರವನ್ನು ಮನೆಗೆ ಬಿಟ್ಟು, ತಾಳ್ಮೆಯನ್ನು ಮನಸ್ಸಲಿಟ್ಟು ಹೊರಗೆ ಹೋಗೋಣ. ಕೆಂಪು ದೀಪ ಕಂಡಾಗ ಬ್ರೇಕ್ ಹಾಕೋಣ. ಹಸಿರು ಬರುವವರೆಗೆ ಕಾಯೋಣ.

ಸುರಕ್ಷಿತವಾಗಿ ಮನೆಗೆ ಹೋದಾಗ ಮಾತ್ರ ಆ ದಿನದ ಗೆಲುವು ನಮ್ಮದಾಗುತ್ತದೆ. ನಿಮ್ಮ ಒಂದು ನಿಮಿಷದ ತಾಳ್ಮೆ, ಯಾರದ್ದೋ ಇಡೀ ಜೀವನವನ್ನು ಉಳಿಸಬಹುದು. ಟ್ರಾಫಿಕ್ ನಿಯಮ ಪಾಲಿಸಿ, ಸುರಕ್ಷಿತವಾಗಿ ಇರಿ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others