ಬೆಂಗಳೂರು: ಶೈಶವಾವಸ್ಥೆಯಲ್ಲಿ ಸಿಗುವ ಪೌಷ್ಟಿಕತೆಯು ವ್ಯಕ್ತಿಯ ದೀರ್ಘಕಾಲೀನ ಆರೋಗ್ಯದ ಮೇಲೆ ಬೀರುವ ಧನಾತ್ಮಕ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ‘ಮಾನವ ಹಾಲಿನ ಮೈಕ್ರೋಬಿಯೊಮ್’ ಹೊಸ ಹಾದಿಗಳನ್ನು ತೆರೆದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಹ್ಯಾಪಿಯೆಸ್ಟ್ ಹೆಲ್ತ್’ ಸಂಸ್ಥೆಯ ವಾರ್ಷಿಕ ಪೌಷ್ಟಿಕತೆ ಸಮಾವೇಶ ‘ದಿ ಎಜ್ ಆಫ್ ನ್ಯೂಟ್ರಿಷನ್ 2026’ರಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನೆರವೇರಿತು.
ಈ ವಿಶೇಷ ಸಮಾವೇಶದಲ್ಲಿ ದೇಶದ ಪ್ರಮುಖ ವೈದ್ಯರು, ಸಂಶೋಧಕರು, ಪೌಷ್ಟಿಕ ತಜ್ಞರು ಮತ್ತು ವೆಲ್ನೆಸ್ ವೃತ್ತಿಪರರು ಭಾಗವಹಿಸಿ, ಬದಲಾಗುತ್ತಿರುವ ಪೌಷ್ಟಿಕತೆ ವಿಜ್ಞಾನ ಹಾಗೂ ರೋಗನಿರೋಧಕ ಆರೋಗ್ಯದಲ್ಲಿ ಅದರ ನಿರ್ಣಾಯಕ ಪಾತ್ರದ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಮೊದಲ 1,000 ದಿನಗಳ ಮಹತ್ವ ಮತ್ತು ಮಾನವ ಹಾಲು ಮಗುವಿನ ಬೆಳವಣಿಗೆಗೆ ಮಾನವ ಹಾಲು ಕೇವಲ ಒಂದು ಆಹಾರ ಮಾತ್ರವಲ್ಲ, ಅದು ದೇಹದ ಆಂತರಿಕ ಆರೋಗ್ಯವನ್ನು ರೂಪಿಸುವ ಶಕ್ತಿ ಹೊಂದಿದೆ. ಇದರಲ್ಲಿರುವ ‘ಹ್ಯೂಮನ್ ಮಿಲ್ಕ್ ಒಲಿಗೋಸಕ್ಕರೈಡ್ಸ್’ (HMOs) ಪ್ರೀಬಯೋಟಿಕ್ಸ್ ಆಗಿ ಕಾರ್ಯನಿರ್ವಹಿಸುತ್ತಾ, ಮಗುವಿನ ಕರುಳಿನಲ್ಲಿ ಮೈಕ್ರೋಬಿಯೊಮ್ ವೃದ್ಧಿಗೆ ಪೋಷಣೆ ನೀಡುತ್ತವೆ. ಗರ್ಭಾವಸ್ಥೆಯ ತಾಯಿಯ ಆಹಾರಕ್ರಮದಿಂದ ಹಿಡಿದು, ತಾಯಿಹಾಲುಣಿಸುವಿಕೆ ಹಾಗೂ ನಂತರದ ಪೂರಕ ಆಹಾರಗಳ ನೀಡಿಕೆಯವರೆಗಿನ ಈ ‘ಮೊದಲ 1,000 ದಿನಗಳು’ ಜೀವಮಾನಪೂರ್ತಿ ಆರೋಗ್ಯಕ್ಕೆ ಗಟ್ಟಿ ಅಡಿಪಾಯ ಹಾಕಲಿವೆ.
ಸಮಾವೇಶದ ಪ್ರಮುಖ ಭಾಷಣಕಾರರಾಗಿದ್ದ ದಯಾನಂದ ಸಾಗರ್ ವಿಶ್ವವಿದ್ಯಾಲಯದ ಡಾ. ಚಂದ್ರಮ್ಮ ದಯಾನಂದ ಸಾಗರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ನ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಆಶಾ ಬೆನಕಪ್ಪ ಅವರು ಮಾತನಾಡಿ, “ಮೊದಲ ಸಾವಿರ ದಿನಗಳು ಮಗುವಿನ ಶಾರೀರಿಕ ಮತ್ತು ಮೆದುಳಿನ ವಿಕಸನಕ್ಕೆ ಅತ್ಯಂತ ಪ್ರಮುಖ ಸಮಯವಾಗಿದೆ. ಮಾನವ ಹಾಲಿನ ಮೈಕ್ರೋಬಿಯೊಮ್ ಮತ್ತು ಕರುಳು-ಮೆದುಳಿನ (Gut-Brain axis) ಸಂಬಂಧದ ಕುರಿತು ನಮ್ಮ ತಂಡವು ಜಾಗತಿಕ ಮಟ್ಟದ ಸಂಶೋಧನೆಯಲ್ಲಿ ತೊಡಗಿದೆ. ಈ ವಿಜ್ಞಾನಕ್ಕೆ ಸರಿಯಾದ ಸಾಂಸಾರಿಕ ಮತ್ತು ಸಾಮಾಜಿಕ ಬೆಂಬಲವೂ ಸಿಗಬೇಕಿದ್ದು, ತಾಯಂದಿರಿಗೆ ಪೌಷ್ಟಿಕತೆ, ಮಾನಸಿಕ ನೆರವು ಮತ್ತು ತಾಯಿಹಾಲುಣಿಸಲು ಸೂಕ್ತ ವಾತಾವರಣ ನಿರ್ಮಿಸುವುದು ಕುಟುಂಬ, ಉದ್ಯೋಗದಾತರು ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ,” ಎಂದರು.
ಪ್ರಿಸಿಷನ್ ಹೆಲ್ತ್ ಮತ್ತು ವೈಯಕ್ತಿಕ ಆಹಾರ ಪದ್ಧತಿ ಸೇಂಟ್ ಜಾನ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಪೌಷ್ಟಿಕತೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಮತಿ ಸ್ವಾಮಿನಾಥನ್ ಅವರ ದಿಕ್ಸೂಚಿ ಭಾಷಣ ಹಾಗೂ “ಪ್ರಿಸಿಷನ್ ಹೆಲ್ತ್ ಯುಗದಲ್ಲಿ ಪೌಷ್ಟಿಕತೆ” ಎಂಬ ವಿಷಯದ ಮೇಲೆ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಇಂಡಿಯನ್ ಡೈಟೆಟಿಕ್ ಅಸೋಸಿಯೇಷನ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷೆ ಶೀಲಾ ಕೃಷ್ಣಸ್ವಾಮಿ, ಲೇಖಕಿ ಡಾ. ನಂದಿತಾ ಅಯ್ಯರ್ ಮತ್ತು ಆಸ್ಟರ್ ಆರ್ವಿ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಅದಿತಿ ಪ್ರಸಾದ್ ಆಪ್ಟೆ ಭಾಗವಹಿಸಿದ್ದರು.
ವೈಯಕ್ತಿಕ ಪೌಷ್ಟಿಕತೆ (Personalised Nutrition) ಎಂಬುದು ಕೇವಲ ಲ್ಯಾಬ್ ಪರೀಕ್ಷೆಗಳು ಅಥವಾ ಆರೋಗ್ಯ ಡೇಟಾಗಳಿಗೆ ಸೀಮಿತವಾಗಬಾರದು. ವ್ಯಕ್ತಿಯ ಶಾರೀರಿಕ ಶ್ರಮ, ನಿದ್ರೆ, ಕುಟುಂಬದ ಆರೋಗ್ಯ ಹಿನ್ನೆಲೆ, ಸಂಸ್ಕೃತಿ ಮತ್ತು ಆಹಾರ ಅಭ್ಯಾಸಗಳನ್ನು ಆಧರಿಸಿ ಇದನ್ನು ನಿರ್ಧರಿಸಬೇಕು. ಮೈಕ್ರೋಬಿಯೊಮ್ ವಿಶ್ಲೇಷಣೆ, ಜಿನೋಮಿಕ್ಸ್ನಂತಹ ತಂತ್ರಜ್ಞಾನಗಳು ವೈದ್ಯರು ಮತ್ತು ಪೌಷ್ಟಿಕ ತಜ್ಞರ ನಿರ್ಧಾರಕ್ಕೆ ಪೂರಕವಾಗಿರಬೇಕೇ ಹೊರತು, ಪ್ರತ್ಯಕ್ಷವಾಗಿ ಮಾರುಕಟ್ಟೆಯಲ್ಲಿ ಸಿಗುವ ಮೈಕ್ರೋಬಿಯೊಮ್ ಪರೀಕ್ಷೆಗಳನ್ನೇ ಅಂತಿಮವೆಂದು ನಂಬಬಾರದು ಎಂದು ಪ್ಯಾನೆಲ್ ಎಚ್ಚರಿಸಿತು.
ಆರೋಗ್ಯ ಜಾಗೃತಿಗೆ ಹಾಸ್ಯದ ಸ್ಪರ್ಶ ಕಾರ್ಯಕ್ರಮದಲ್ಲಿ ಡಾ. ಉಮೇಶ್ ವಾಧವಾನಿ ನಡೆಸಿಕೊಟ್ಟ “ಡಯಟಿಂಗ್ ಕಾ ಮಜಾಕ್” ಎಂಬ ಹಾಸ್ಯಮಯ ಪ್ರಹಸನವು ಪ್ರೇಕ್ಷಕರ ಗಮನ ಸೆಳೆಯಿತು. ಡಯಟಿಂಗ್ ಕುರಿತಾದ ತಪ್ಪು ಕಲ್ಪನೆಗಳನ್ನು ಹಾಸ್ಯದ ಮೂಲಕ ತಳ್ಳಿಹಾಕಿದ ಅವರು, ಸುಸ್ಥಿರ ಹಾಗೂ ಸಮತೋಲಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಸಮಾವೇಶದ ಕುರಿತು ಮಾತನಾಡಿದ ‘ಹ್ಯಾಪಿಯೆಸ್ಟ್ ಹೆಲ್ತ್’ನ ಜ್ಞಾನ ವ್ಯವಹಾರ ವಿಭಾಗದ ಸಿಒಒ ಹಾಗೂ ಮುಖ್ಯ ಸಂಪಾದಕರಾದ ರಘು ಕೃಷ್ಣನ್, “ಆರೋಗ್ಯ ಸುಧಾರಣೆಗೆ ಪೌಷ್ಟಿಕತೆ ಅತ್ಯಂತ ಶಕ್ತಿಯುತ ಸಾಧನ. ಆದರೆ ಅದನ್ನೇ ಹೆಚ್ಚು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸಂಶೋಧನೆ ಹಾಗೂ ನೈಜ ಆರೋಗ್ಯ ಸೇವೆಯ ನಡುವಿನ ಅಂತರವನ್ನು ಕಡಿಮೆ ಮಾಡಿ, ಜನರಿಗೆ ಸಾಕ್ಷ್ಯಾಧಾರಿತ ಮಾಹಿತಿ ನೀಡುವುದೇ ‘ದಿ ಎಜ್ ಆಫ್ ನ್ಯೂಟ್ರಿಷನ್ 2026’ ಉದ್ದೇಶವಾಗಿದೆ,” ಎಂದು ತಿಳಿಸಿದರು.





