GBA ಹೆಸರಲ್ಲಿ ಬೆಂಗಳೂರನ್ನು 5 ಪಾಲಿಕೆಗಳಾಗಿ ಒಡೆದು ಲೂಟಿ; ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೆಸರಿನಲ್ಲಿ ಬೆಂಗಳೂರನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳಾಗಿ ವಿಭಜಿಸಿ ಕಾಂಗ್ರೆಸ್ ಸರ್ಕಾರ ಬೊಕ್ಕಸ ಲೂಟಿ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಜನರಿಗೆ ಮೂಲಸೌಕರ್ಯ ಸೌಲಭ್ಯಗಳು ಸಿಗುವುದು ಯಾವಾಗ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದಿಂದ ನಿಗಮಗಳಿಗೆ ಬರಬೇಕಿದ್ದ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯ 2,199.99 ಕೋಟಿ ರೂ. ಅನುದಾನ ಬಿಡುಗಡೆಯಾಗಿಲ್ಲ. ಅದೇ ರೀತಿ ರಾಜ್ಯ ಹಣಕಾಸು ಆಯೋಗದಿಂದ ನೀಡಬೇಕಿದ್ದ ರೂ. 250 ಕೋಟಿ ವಿಶೇಷ ಅನುದಾನವೂ ಇನ್ನೂ ಬಿಡುಗಡೆಯಾಗದೆ ಕಾಗದದಲ್ಲೇ ಉಳಿದಿದೆ.

ಪಾಲಿಕೆಗಳನ್ನು ಕೇವಲ ಕಸ ವಿಲೇವಾರಿ ಮತ್ತು ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಸೀಮಿತಗೊಳಿಸಲಾಗಿದೆ. ಉದ್ಯಾನವನಗಳು ಹಾಗೂ ಕೆರೆಗಳ ಅಭಿವೃದ್ಧಿಗೂ ಅಗತ್ಯ ಅನುದಾನ ನೀಡಲಾಗುತ್ತಿಲ್ಲ.ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್’ ಸಂಸ್ಥೆಗೆ ವರ್ಗಾಯಿಸುವ ಮೂಲಕ ನಗರ ಪಾಲಿಕೆಗಳ ಪಾತ್ರವನ್ನು ಸೀಮಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ತೆರಿಗೆದಾರರ ಹಣವನ್ನು ಲೂಟಿ ಮಾಡುವುದು, ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳುವುದು ಹಾಗೂ ಬೆಂಗಳೂರಿನ ಜನರಿಗೆ ಧೂಳು, ಗುಂಡಿ ಮತ್ತು ನರಕಯಾತನೆ ನೀಡುವುದೇ ನಿಮ್ಮ ಬ್ರಾಂಡ್ ಬೆಂಗಳೂರು ಪರಿಕಲ್ಪನೆಯೇ’ ಎಂದು ಟೀಕಿಸಿದ್ದಾರೆ.ಬೆಂಗಳೂರಿನ ಅಭಿವೃದ್ಧಿಗೆ ಸೂಕ್ತ ಯೋಜನೆ ಹಾಗೂ ಅಗತ್ಯ ಅನುದಾನ ಇಲ್ಲ. ಜನರಿಂದ ಸಂಗ್ರಹವಾಗುವ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದೇ ವೇಳೆ ‘ಗ್ರೇಟರ್ ಬೆಂಗಳೂರು’ ಎಂದು ಹೆಸರು ಬದಲಾಯಿಸಿ ಬೆಂಗಳೂರನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳನ್ನಾಗಿ ವಿಭಜಿಸಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಎಂದು ಪ್ರಶ್ನಿಸಿರುವ ಅವರು, ರೂ.20,220.48 ಕೋಟಿ ಬಜೆಟ್ ಗಾತ್ರದ ಅಂಕಿ-ಅಂಶಗಳನ್ನು ತೋರಿಸಿ ಸರ್ಕಾರ ಬೀಗುತ್ತಿದೆ. ಆದರೆ, ಬೆಂಗಳೂರಿನ ಅಭಿವೃದ್ಧಿಯ ವಾಸ್ತವ ಸ್ಥಿತಿ ಬೇರೆಯೇ ಇದೆ ಎಂದು ಟೀಕಿಸಿದ್ದಾರೆ.

ವರ್ಷದ ಮೊದಲ ಆರು ತಿಂಗಳು ಸಿಬ್ಬಂದಿ ನೇಮಕ, ಕಚೇರಿ ವ್ಯವಸ್ಥೆ ಹಾಗೂ ಕಡತ ಹಂಚಿಕೆಯಲ್ಲೇ ಕಳೆದಿದ್ದು, ಉಳಿದ ಅವಧಿಯಲ್ಲಿ ಬಜೆಟ್ ಕ್ರಿಯಾ ಯೋಜನೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲೇ ಸಮಯ ಮುಗಿಯುತ್ತಿದೆ.ವರ್ಷ ಮುಗಿಯುತ್ತಾ ಬಂದರೂ ಬೆಂಗಳೂರಿನಲ್ಲಿ ಒಂದು ರೂಪಾಯಿ ಅಭಿವೃದ್ಧಿ ಕಾರ್ಯವೂ ನಡೆದಿಲ್ಲ ಎಂದು ತಿಳಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others