ಬೆಂಗಳೂರು: ರಾಜಧಾನಿಯ ಜನಪ್ರಿಯ ವನ್ಯಜೀವಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಪ್ರವಾಸಿಗರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಪ್ರಾಣಿಗಳ ಸಂರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ ಬರೋಬ್ಬರಿ ₹38 ಕೋಟಿ ವೆಚ್ಚದ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನವೀಕೃತಗೊಂಡ ಪ್ರವೇಶ ದ್ವಾರ, ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳು ಹಾಗೂ ಪ್ರಾಣಿಗಳ ಹೊಸ ಆವರಣಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ(Minister Ramalinga Reddy) ಅವರು ಸೋಮವಾರ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರವಾಸಿಗರ ಸಂಚಾರಕ್ಕಾಗಿ ನೂತನ ಬ್ಯಾಟರಿ ಚಾಲಿತ (ಇ-ವೆಹಿಕಲ್) ವಾಹನಗಳ ಸಂಚಾರಕ್ಕೆ ಸಚಿವ ರಾಮಲಿಂಗಾರೆಡ್ಡಿ(Minister Ramalinga Reddy) ಹಸಿರು ನಿಶಾನೆ ತೋರಿದರು. ಇದೇ ಸಂದರ್ಭದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ “ಅಡವಿ” ಆಡಳಿತ ಕಚೇರಿ ಕಟ್ಟಡ, ಸಸ್ಯ ಸಂರಕ್ಷಣೆಯ ಕೇಂದ್ರೀಯ ನರ್ಸರಿ, ಪ್ರಾಣಿಗಳ ಪೌಷ್ಟಿಕ ಆಹಾರ ಪೂರೈಕೆಗಾಗಿ ಲೈವ್ ಫೀಡ್ ಯುನಿಟ್ ಹಾಗೂ ಅನಾರೋಗ್ಯಕ್ಕೊಳಗಾಗುವ ಪ್ರಾಣಿಗಳ ಉಪಚಾರಕ್ಕಾಗಿ ಪ್ರತ್ಯೇಕ ಕ್ವಾರಂಟೈನ್ ಘಟಕಗಳನ್ನು ಉದ್ಘಾಟಿಸಲಾಯಿತು.
ಪ್ರಾಣಿ-ಪಕ್ಷಿಗಳಿಗೆ ನೂತನ ಆವರಣ; ಸಿಬ್ಬಂದಿಗೆ ವಸತಿ ಗೃಹ
ಉದ್ಯಾನವನಕ್ಕೆ ಬರುವ ಸಂದರ್ಶಕರ ಅನುಕೂಲಕ್ಕಾಗಿ ‘ಸುವರ್ಣಮುಖಿ ಕೆಫೆ’ ಹಾಗೂ ನೆನಪಿನ ಕಾಣಿಕೆಗಳ ಮಾರಾಟಕ್ಕಾಗಿ ‘ಝೂ ಶಾಪ್’ ತೆರೆಯಲಾಗಿದೆ. ಜತೆಗೆ ಅರಣ್ಯ ಸಂರಕ್ಷಣೆಯಲ್ಲಿ ಹಗಲಿರುಳು ದುಡಿಯುವ ಇಲಾಖಾ ಸಿಬ್ಬಂದಿಗಾಗಿ ನಿರ್ಮಿಸಲಾದ ನೂತನ ವಸತಿ ಸಮುಚ್ಚಯಗಳನ್ನು ಹಸ್ತಾಂತರಿಸಲಾಯಿತು. ವೀಕ್ಷಕರನ್ನು ಸೆಳೆಯಲು ತೋಳ, ಚೀತಾ, ಎಮು, ರಿಯಾ ಮತ್ತು ಫೆಸೆಂಟ್ ಪಕ್ಷಿಗಳಿಗಾಗಿ ನೈಸರ್ಗಿಕ ಪರಿಸರಕ್ಕೆ ತಕ್ಕಂತೆ ಹೊಸದಾಗಿ ನಿರ್ಮಿಸಲಾದ ಆವರಣಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.
ಮೃತ ಪಶುವೈದ್ಯೆ ಡಾ. ಸಮೀಕ್ಷಾ ಸ್ಮರಣಾರ್ಥ ಮರಿ ನೀರ್ಗುದುರೆಗೆ ನಾಮಕರಣ
ಕಾರ್ಯಕ್ರಮದಲ್ಲಿ ಹೃದಯಸ್ಪರ್ಶಿ ನಿರ್ಧಾರವೊಂದನ್ನು ಕೈಗೊಳ್ಳಲಾಯಿತು. ಇತ್ತೀಚೆಗೆ ಶಿವಮೊಗ್ಗದಲ್ಲಿ ಹಿಪ್ಪೋಪೊಟಮಸ್ಗೆ ಚಿಕಿತ್ಸೆ ನೀಡುವ ವೇಳೆ ದುರಂತ ಸಾವಿಗೀಡಾಗಿದ್ದ ಕರ್ತವ್ಯನಿಷ್ಠ ಪಶುವೈದ್ಯಾಧಿಕಾರಿ ದಿವಂಗತ ಡಾ. ಸಮೀಕ್ಷಾ ಅವರ ಸೇವೆಯನ್ನು ಸ್ಮರಿಸಲಾಯಿತು. ಅವರ ಗೌರವಾರ್ಥವಾಗಿ ಬನ್ನೇರುಘಟ್ಟದ ನೀರ್ಗುದುರೆಗಳ ವಿಭಾಗಕ್ಕೆ ಹಾಗೂ ಇತ್ತೀಚೆಗಷ್ಟೇ ಜನಿಸಿದ ಮರಿ ನೀರ್ಗುದುರೆಗೆ “ಸಮೀಕ್ಷಾ” ಎಂದು ಹೆಸರಿಡುವಂತೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಆನೆಗಳ ಆರೈಕೆ ಕೇಂದ್ರ ವೀಕ್ಷಿಸಿದ ಸಚಿವರು
ಬಳಿಕ ಸಫಾರಿ ವಲಯಕ್ಕೆ ತೆರಳಿದ ಸಚಿವರು, ಗಜಪಡೆಗಳ ಸಮಗ್ರ ಆರೋಗ್ಯ ಮತ್ತು ನಿರ್ವಹಣೆಗಾಗಿ ಮೀಸಲಾಗಿರುವ ‘ಸುವರ್ಣ ಆನೆ ಆರೈಕೆ ಕೇಂದ್ರ’ದ ವೀಕ್ಷಣಾ ಗೋಪುರವನ್ನು ಅನಾವರಣಗೊಳಿಸಿದರು. ನಂತರ ಸಫಾರಿ ಮೂಲಕ ತೆರಳಿ ಪ್ರಾಣಿ ಸಂರಕ್ಷಣೆ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಅರಣ್ಯ ಪಡೆ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ರವಿ ಬಿ.ಪಿ. ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.





