ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಶ್ಲಾಘಿಸಿದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ‘ಅಂತ್ಯೋದಯ’ ತತ್ವದ ಆಧಾರದ ಮೇಲಿರುವ ಮೋದಿ ಅವರ ನಾಯಕತ್ವವು ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ನಡೆದ ‘ಸೇವಾ ಸಂಕಲ್ಪ’ ಅಭಿಯಾನದ ಭಾಗವಾಗಿ ಆಯೋಜಿಸಲಾಗಿದ್ದ ‘ಸೇವಾ ಜ್ಯೋತಿ ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಯಡಿಯೂರಪ್ಪ, ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 13 ವರ್ಷ ಮತ್ತು ಕಳೆದ 12 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿ, ಮೋದಿ ಅವರು ಒಟ್ಟು 25 ವರ್ಷಗಳ ನಿರಂತರ ಸಾರ್ವಜನಿಕ ಸೇವೆಯನ್ನು ಪೂರೈಸಿದ್ದಾರೆ ಎಂದು ಅವರು ತಿಳಿಸಿದರು.
ದೇಶಕ್ಕೆ ಮೋದಿಯವರು ಸಲ್ಲಿಸಿರುವ ಸೇವೆಯನ್ನು ಸಾಟಿಯಿಲ್ಲದ್ದು. ಮೋದಿಯವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ ಮತ್ತು ಅಂತಹ ನಾಯಕರು ದೇಶದ ನೇತೃತ್ವ ವಹಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಯಡಿಯೂರಪ್ಪ ಹೇಳಿದರು.
ಮೋದಿ ಅವರ ಪಯಣವನ್ನು ಗಮನಿಸಿದಾಗ, ರಾಜಕೀಯವು ಅವರಿಗೆ ಅಧಿಕಾರ ಪಡೆಯುವ ಮಾರ್ಗವಾಗಿರಲಿಲ್ಲ, ಬದಲಾಗಿ ಜನರಿಗೆ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವಾಗಿತ್ತು ಎಂದು ನನಗೆ ಅನ್ನಿಸುತ್ತದೆ. ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಎರಡೂ ಹುದ್ದೆಗಳಲ್ಲಿದ್ದಾಗಲೂ, ಸಾಮಾನ್ಯ ನಾಗರಿಕರ ಜೀವನವನ್ನು ಪರಿವರ್ತಿಸುವ ದೃಢ ಸಂಕಲ್ಪದೊಂದಿಗೆ ಮೋದಿ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಜನರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡುವಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು; ಇಂತಹ ಪ್ರಯತ್ನಗಳು ಮೋದಿ ಅವರ ಮೇಲಿರುವ ಅಭಿಮಾನದ ಅಭಿವ್ಯಕ್ತಿಯಾಗಬೇಕು ಎಂದು ತಿಳಿಸಿದ್ದಾರೆ.
ಮೋದಿ ಅವರ ಸಾಧನೆಗಳು ಮತ್ತು ಸೇವಾ ಚಟುವಟಿಕೆಗಳು ಪಕ್ಷದ ಕಾರ್ಯಕರ್ತರಿಗೆ ದಾರಿದೀಪವಾಗಿವೆ ಎಂದು ಹೇಳಿದರು.
‘ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಅರ್ಥಪೂರ್ಣ ಸೇವೆಯನ್ನು ಪೂರೈಸುತ್ತಿರುವ ಸಂದರ್ಭ ಇದಾಗಿದೆ. ಈ ಅವಧಿಯಲ್ಲಿ, ‘ಸೇವಾ ಸಂಕಲ್ಪ’ ಅಭಿಯಾನದ ಮೂಲಕ ನಾವೆಲ್ಲರೂ ರಾಷ್ಟ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸುತ್ತಿದ್ದೇವೆ ಮತ್ತು ಸಂಭ್ರಮಿಸುತ್ತಿದ್ದೇವೆ’ ಎಂದರು.





