ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ವಾಹನ ಸವಾರರು ಎದುರಿಸುತ್ತಿದ್ದ ಅತಿ ದೊಡ್ಡ ತಲೆನೋವಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ದೀರ್ಘ ಪ್ರಯಾಣದ ವೇಳೆ ವಾಹನಗಳು ಕೆಟ್ಟು ನಿಂತರೆ ಅಥವಾ ಟೈರ್ ಪಂಕ್ಚರ್ ಆದಲ್ಲಿ ತಕ್ಷಣಕ್ಕೆ ಮೆಕ್ಯಾನಿಕ್ ನೆರವು ಸಿಗದೆ ಸವಾರರು ಅನುಭವಿಸುತ್ತಿದ್ದ ಸಂಕಷ್ಟಗಳನ್ನು ನೀಗಿಸಲು ಹೆದ್ದಾರಿಯುದ್ದಕ್ಕೂ ಅತ್ಯಾಧುನಿಕ ದುರಸ್ತಿ ಕೇಂದ್ರಗಳನ್ನು ಆರಂಭಿಸಲು ಪ್ರಾಧಿಕಾರ ನಿರ್ಧರಿಸಿದೆ.
ಪ್ರಯಾಣಿಕರಿಂದ ಸರಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಎನ್‌ಎಚ್‌ಎಐ, ತುರ್ತು ರಸ್ತೆಬದಿಯ ನೆರವು ವ್ಯವಸ್ಥೆಯನ್ನು ಬಲಪಡಿಸಲು ಈ ಹೆಜ್ಜೆ ಇಟ್ಟಿದೆ.
ಪ್ರತಿ 40-60 ಕಿಲೋಮೀಟರ್‌ಗೆ ಲಭ್ಯವಾಗಲಿದೆ ಸರ್ವಿಸ್ ಹಬ್
NHAI ನ ಅಂಗಸಂಸ್ಥೆಯಾದ ‘ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್’ (NHLML), ರಸ್ತೆಬದಿಯ ಸೌಲಭ್ಯ ಕೇಂದ್ರಗಳಲ್ಲಿ (WSA – Wayside Amenities) ಶೀಘ್ರವಾಗಿ ವಾಹನ ದುರಸ್ತಿ ಮತ್ತು ಪಂಕ್ಚರ್ ಶಾಪ್‌ಗಳನ್ನು ಸಜ್ಜುಗೊಳಿಸುವಂತೆ ತನ್ನ ಪ್ರಾದೇಶಿಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಪ್ರತಿ 40 ರಿಂದ 60 ಕಿಲೋಮೀಟರ್ ಅಂತರದಲ್ಲಿ ಪ್ರಯಾಣಿಕರ ವಿಶ್ರಾಂತಿಗಾಗಿ ಇಂತಹ ಬೃಹತ್ ಕೇಂದ್ರಗಳನ್ನು ನಿರ್ಮಿಸಲಾಗಿರುತ್ತದೆ. ಸುಮಾರು ನಾಲ್ಕು ಹೆಕ್ಟೇರ್‌ನಷ್ಟು ವಿಶಾಲ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ಆವರಣಗಳಲ್ಲಿ ಈಗಾಗಲೇ ಪೆಟ್ರೋಲ್ ಬಂಕ್, ಹೋಟೆಲ್‌ಗಳು, ವಿಶ್ರಾಂತಿ ಗೃಹಗಳು, ಇವಿ (EV) ಚಾರ್ಜಿಂಗ್ ಪಾಯಿಂಟ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈಗ ಇವುಗಳ ಸಾಲಿಗೆ ವಾಹನ ರಿಪೇರಿ ಘಟಕಗಳೂ ಸೇರ್ಪಡೆಯಾಗುತ್ತಿರುವುದರಿಂದ ಪ್ರಯಾಣಿಕರ ಹಾಗೂ ವಾಣಿಜ್ಯ ವಾಹನ ಸವಾರರ ಆತಂಕ ದೂರಾಗಲಿದೆ.
ಎಕ್ಸ್‌ಪ್ರೆಸ್‌ವೇಗಳಲ್ಲಿ ಸಿಲುಕುತ್ತಿದ್ದ ಸವಾರರಿಗೆ ತತ್‌ಕ್ಷಣದ ನೆರವು
ವಿಶೇಷವಾಗಿ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇಗಳಲ್ಲಿ (Access-Controlled Expressways) ಒಮ್ಮೆ ವಾಹನ ಕೆಟ್ಟು ನಿಂತರೆ ಸುತ್ತಮುತ್ತ ಯಾವುದೇ ಸ್ಥಳೀಯ ಗ್ಯಾರೇಜ್‌ಗಳು ಸಿಗದೆ ವಾಹನ ಚಾಲಕರು ಅಸಹಾಯಕರಾಗುತ್ತಿದ್ದರು. ಹೆದ್ದಾರಿಗಳಲ್ಲಿ ಸಾಗುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಈ ರೀತಿಯ ತಾಂತ್ರಿಕ ದೋಷಗಳು ಸಂಭವಿಸಿದಾಗ ಸವಾರರು ಸುದೀರ್ಘ ಸಮಯ ರಸ್ತೆಯಲ್ಲೇ ಕಾಲ ಕಳೆಯಬೇಕಾಗುತ್ತಿತ್ತು. ಹೊಸ ಯೋಜನೆಯಿಂದಾಗಿ ವಾಹನಗಳು ಕೆಟ್ಟು ನಿಲ್ಲುವ ಸಮಯ ಕಡಿಮೆಯಾಗಲಿದ್ದು, ರಸ್ತೆ ಸುರಕ್ಷತೆಯೂ ಗಣನೀಯವಾಗಿ ಸುಧಾರಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಹಭಾಗಿತ್ವದಲ್ಲಿ (PPP) ತ್ವರಿತ ವೇಗ
ಪ್ರಸ್ತುತ ದೇಶಾದ್ಯಂತ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಈ ರಸ್ತೆಬದಿಯ ಸೌಲಭ್ಯಗಳ ಜಾಲವನ್ನು ವಿಸ್ತರಿಸಲಾಗುತ್ತಿದೆ. ಈ ಕೇಂದ್ರಗಳ ಉಸ್ತುವಾರಿ ಹೊಂದಿರುವ ಆಪರೇಟರ್‌ಗಳಿಗೆ ವಾಹನ ಸರ್ವಿಸ್ ಕೇಂದ್ರಗಳನ್ನು ನಡೆಸಲು ಈಗಾಗಲೇ ನಿಯಮಾವಳಿಗಳಲ್ಲಿ ಅವಕಾಶ ನೀಡಲಾಗಿದ್ದರೂ, ಈಗ ಅದರ ಅನುಷ್ಠಾನ ಪ್ರಕ್ರಿಯೆಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳುವಂತೆ NHAI ಸೂಚಿಸಿದೆ.
ಹೆದ್ದಾರಿ ಮೂಲಸೌಕರ್ಯದೊಂದಿಗೆ ವಾಹನ ದುರಸ್ತಿ ಸೇವೆಗಳನ್ನು ಸಂಯೋಜಿಸುವ ಮೂಲಕ, ಭಾರತದಾದ್ಯಂತ ಸಂಚರಿಸುವ ಪ್ರತಿಯೊಬ್ಬ ಸವಾರನಿಗೂ ಅತ್ಯಂತ ಸುರಕ್ಷಿತ ಮತ್ತು ಸುಲಭ ಪ್ರಯಾಣದ ಅನುಭವ ನೀಡುವುದು ಪ್ರಾಧಿಕಾರದ ಪ್ರಮುಖ ಗುರಿಯಾಗಿದೆ.





