ಬೆಂಗಳೂರು: 72,000 ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ನಾವು ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಬರುವಾಗ 2.5 ಲಕ್ಷ ಹುದ್ದೆಗಳು ಖಾಲಿಯಿದ್ದಾವೆ, ಹಂತ ಹಂತವಾಗಿ ನಾವು ಅದನ್ನು ತುಂಬುತ್ತೇವೆ ಎಂದು ಹೇಳಿದ್ದೆವು. ಅನೇಕ ಕಾರಣಗಳಿಂದ ಅದು ವಿಳಂಬವಾಯಿತು. ಒಳಮೀಸಲಾತಿ ವಿಚಾರ ಬಗೆಹರಿಯದೆ ಇದ್ದದ್ದು ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಸಮಿತಿಯ ವರದಿ ಆಧಾರದ ಮೇಲೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಬಳಿಕ ಬಜೆಟ್‌ನಲ್ಲಿಯೇ 56,942 ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ತಿಳಿಸಿದ್ದೆವು ಎಂದರು.
ಬಳಿಕ ಅದರ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದವು. 24,000 ಹುದ್ದೆಗಳಿಗೆ ಎಫ್‌ಡಿಯವರು ಕೂಡ ಅನುಮತಿಯನ್ನು ನೀಡಿದ್ದರು, ಎಲ್ಲಾ ಇಲಾಖೆಗಳಿಗೆ ನೋಟಿಫೀಕೇಷನ್ ಮಾಡಿ ಎಂದು ನಾವು ತಿಳಿಸಿದ್ದೆವು. ಈ ಮಧ್ಯೆ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾದ ನಂತರ ಅದನ್ನು ಪುನರ್ ಪರಿಶೀಲನೆ ಮಾಡಿ ಈಗ 72,000 ಹುದ್ದೆಗಳನ್ನು ತುಂಬಬೇಕು ಎಂದು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ನೋಟಿಫಿಕೇಷನ್ಸ್ ಮಾಡಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.
ಅದೇ ರೀತಿ ಶಿಕ್ಷಕರು, ವೈದ್ಯರು, ನರ್ಸುಗಳು, ಇಂಜಿನಿಯರ್ಸ್‌ಗಳು ಸೇರಿದಂತೆ ಎಲ್ಲಾ ಇಲಾಖೆಗಳಿಗೆ ತಡಮಾಡದಂತೆ ತಿಳಿಸಬೇಕೆಂದು ಮೊನ್ನೆ ನಡೆದ ಕ್ಯಾಬಿನೇಟ್‌ನಲ್ಲಿ ಚರ್ಚೆಮಾಡಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಇಬ್ಬರು ಅಧಿಕಾರಿಗಳಾದ ಎಐಎಸ್ ಅಧಿಕಾರಿ ಉಮಾ ಮಹದೇವನ್ ಮತ್ತು ಗೌರವ್ ಗುಪ್ತಾ ಅವರನ್ನು ಮೇಲುಸ್ತುವಾರಿಗಾಗಿ ನೇಮಕ ಮಾಡಿದ್ದಾರೆ ಎಂದರು.
ನಮ್ಮ ಉದ್ದೇಶವೆಂದರೆ ರಾಜ್ಯದಲ್ಲಿ ಅನೇಕ ನಿರುದ್ಯೋಗಿಗಳಿದ್ದಾರೆ, ಅವರೆಲ್ಲರೂ ಅನೇಕ ಸಂದರ್ಭದಲ್ಲಿ ನೇಮಕಾತಿ ಮಾಡುವಂತೆ ಬೀದಿಗಿಳಿದಿ ಹೋರಾಟ ಮಾಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ನಾವು ವೇಗವಾಗಿ 72,000 ಹುದ್ದೆಯನ್ನು ತುಂಬುತ್ತಿದ್ದೇವೆ ಎಂದರು.





