ದಾವಣಗೆರೆ: ಪೋಕ್ಸೋ ಪ್ರಕರಣದ ಆರೋಪ ಎದುರಿಸುತ್ತಿರುವ ಹರಿಹರದ ಜ್ಞಾನಾನಂದಪೀಠದ ವಚನಾನಂದ ಸ್ವಾಮೀಜಿಯವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ತೀರ್ಪನ್ನು ದಾವಣಗೆರೆಯ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಜೂನ್ 30ಕ್ಕೆ ಕಾಯ್ದಿರಿಸಿದೆ.
ಸ್ವಾಮೀಜಿಗೆ ಕಳೆದ ಮೇ 2 ರಂದು ಮಂಜೂರಾಗಿದ್ದ ಜಾಮೀನನ್ನು ರದ್ದುಪಡಿಸಬೇಕೆಂದು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಸಂತ್ರಸ್ತರ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೂನ್ 11 ರಂದೇ ಇದರ ಸಂಪೂರ್ಣ ವಿಚಾರಣೆ ಮುಗಿದಿದ್ದು, ಇಂದು ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಇದೇ ಪ್ರಕರಣದ ವಿಚಾರಣೆ ಸದ್ಯ ಹೈಕೋರ್ಟ್‌ನಲ್ಲಿಯೂ ಬಾಕಿ ಇರುವುದರಿಂದ ಕೆಳ ನ್ಯಾಯಾಲಯವು ತನ್ನ ಆದೇಶವನ್ನು ಜೂನ್ 30ಕ್ಕೆ ಮುಂದೂಡಿದೆ.
ಹೈಕೋರ್ಟ್ ಆದೇಶದ ಮೇಲೆಯೇ ಎಲ್ಲರ ಕಣ್ಣು: ಸ್ವಾಮೀಜಿ ಪರ ವಕೀಲರಾದ ಎಸ್.ವಿ. ಪಾಟೀಲ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, “ಜಾಮೀನು ರದ್ದತಿ ಕೋರಿ ದೂರುದಾರರು ಜೂನ್ 6 ರಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜೂನ್ 23 ರಂದು ಹೈಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದ್ದು, ಅಂದು ವಚನಾನಂದ ಶ್ರೀಗಳು ಖುದ್ದಾಗಿ ಹಾಜರಾಗಲಿದ್ದಾರೆ. ಮೇಲಿನ ನ್ಯಾಯಾಲಯದಲ್ಲಿ ಪ್ರಕರಣದ ತೀರ್ಪು ಬಾಕಿ ಇರುವಾಗ, ಅದಕ್ಕೆ ವ್ಯತಿರಿಕ್ತವಾದ ಆದೇಶ ಕೆಳ ನ್ಯಾಯಾಲಯದಿಂದ ಬರಬಾರದು ಎಂಬ ಕಾರಣಕ್ಕೆ ಪೋಕ್ಸೋ ಕೋರ್ಟ್ ತನ್ನ ತೀರ್ಪನ್ನು ಮುಂದೂಡಿದೆ” ಎಂದರು.
ಮಠದಿಂದ ಹೊರಹಾಕಲು ಪ್ಲಾನ್ – ವಕೀಲರ ಗಂಭೀರ ಆರೋಪ: ಇದೇ ವೇಳೆ ತನಿಖಾ ಸಂಸ್ಥೆಗಳ ನಡೆಯನ್ನು ಪ್ರಶ್ನಿಸಿದ ವಕೀಲರು, “ವಚನಾನಂದ ಸ್ವಾಮೀಜಿಯವರನ್ನು ಮಠದ ಪೀಠದಿಂದ ಕೆಳಗಿಳಿಸಲು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಲಾಗಿದೆ. ತನಿಖೆಯೇ ಇನ್ನೂ ಪೂರ್ಣಗೊಂಡಿಲ್ಲ ಎಂದ ಮೇಲೆ ಪೊಲೀಸರು ಅಷ್ಟು ಅವಸರವಾಗಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದು ಏಕೆ? ಈ ಇಡೀ ಕುತಂತ್ರದ ಹಿಂದೆ ಯಾರ ಕೈವಾಡವಿದೆ ಎಂಬುದು ಶೀಘ್ರದಲ್ಲೇ ಜಗಜ್ಜಾಹೀರಾಗಲಿದೆ. ನಾವು ಕಾನೂನಾತ್ಮಕವಾಗಿಯೇ ಈ ಹೋರಾಟವನ್ನು ಎದುರಿಸಲಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಜೂನ್ 23 ರ ಹೈಕೋರ್ಟ್ ವಿಚಾರಣೆಯ ನಂತರವೇ ಈ ಪ್ರಕರಣದಲ್ಲಿ ವಚನಾನಂದ ಶ್ರೀಗಳ ಭವಿಷ್ಯ ನಿರ್ಧಾರವಾಗಲಿದೆ.





