ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪನ: 32 ಮಂದಿ ಸಾವು, 700ಕ್ಕೂ ಹೆಚ್ಚು ಜನರಿಗೆ ಗಾಯ, ತುರ್ತು ಪರಿಸ್ಥಿತಿ ಘೋಷಣೆ

ಕಾರಕಾಸ್: ವೆನೆಜುವೆಲಾದ ಕರಾವಳಿ ತೀರದಲ್ಲಿ ಬುಧವಾರ ಸಂಜೆ ಭೀಕರ ಅವಳಿ (Back-to-back) ಭೂಕಂಪಗಳು ಸಂಭವಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಭೂಕಂಪನದ ಭೀಕರತೆಗೆ ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಧರೆಗುರುಳಿದ್ದು, ಗಾಬರಿಗೊಂಡ ನಿವಾಸಿಗಳು ಪ್ರಾಣಭಯದಿಂದ ಬೀದಿಗಿಳಿದು ಓಡಿದ್ದಾರೆ.

ಕೇವಲ ಒಂದು ನಿಮಿಷದ ಅಂತರದಲ್ಲಿ ನಡುಗಿದ ಭೂಮಿ

ರಿಕ್ಟರ್ ಮಾಪಕದಲ್ಲಿ ಭೀಕರ ತೀವ್ರತೆಯ 7.2 ಮತ್ತು 7.5 ರಷ್ಟು ಪ್ರಬಲ ಭೂಕಂಪನಗಳು ಕರಾವಳಿ ತೀರದಲ್ಲಿ ದಾಖಲಾಗಿವೆ. ಅತ್ಯಂತ ಕಡಿಮೆ ಅವಧಿಯ ಅಂತರದಲ್ಲಿ ಬೆನ್ನುಬೆನ್ನಿಗೆ ಸಂಭವಿಸಿದ ಈ ಪ್ರಬಲ ಭೂಕಂಪಗಳು ಇಡೀ ವೆನೆಜುವೆಲಾ ದೇಶವನ್ನೇ ಬೆಚ್ಚಿಬೀಳಿಸಿವೆ. ರಾಜಧಾನಿ ಕಾರಕಾಸ್‌ನಲ್ಲಿ ಭೂಮಿಯ ಕಂಪನಕ್ಕೆ ಹಲವು ಪ್ರಮುಖ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು ಕುಸಿದು ಬಿದ್ದಿವೆ.

1,700 ಕಿಲೋಮೀಟರ್ ದೂರದ ಬ್ರೆಜಿಲ್‌ನಲ್ಲೂ ಕಂಪನ!

ಈ ಭೂಕಂಪಗಳ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಇದರ ಪ್ರಭಾವ ನೆರೆದೇಶಗಳ ಮೇಲೂ ಉಂಟಾಗಿದೆ. ವೆನೆಜುವೆಲಾದಿಂದ ಸುಮಾರು1,700 ಕಿಲೋಮೀಟರ್ ದೂರದಲ್ಲಿರುವ ಬ್ರೆಜಿಲ್‌ನ ಅಮೆಜಾನ್ ಪ್ರದೇಶದ ನಗರಗಳಲ್ಲೂ ಭೂಮಿ ಪ್ರಬಲವಾಗಿ ಕಂಪಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ನಗರಗಳ ಪ್ರಮುಖ ಕಟ್ಟಡಗಳಲ್ಲಿದ್ದ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ರಕ್ಷಣಾ ಕಾರ್ಯ ಚುರುಕು

ದುರಂತ ಸಂಭವಿಸಿದ ಪ್ರದೇಶಗಳಲ್ಲಿ ಸದ್ಯ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಗಳು ಆರಂಭವಾಗಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಹೊರತೆಗೆಯಲು ತುರ್ತು ನಿರ್ವಹಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅಪಾರ ಪ್ರಮಾಣದ ಹಾನಿಯಾಗಿದ್ದು, ಸಾವಿನ ಸಂಖ್ಯೆ ಮತ್ತು ಗಾಯಗೊಂಡವರ ನಿಖರ ವಿವರಗಳಿಗಾಗಿ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.

32 ಸಾವು, 700ಕ್ಕೂ ಹೆಚ್ಚು ಜನರಿಗೆ ಗಾಯ; ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ (ಬೆನ್ನುಬೆನ್ನಿಗೆ) ಭೂಕಂಪನಕ್ಕೆ ಕನಿಷ್ಠ 32 ಜನರು ಬಲಿಯಾಗಿದ್ದು, 7೦೦ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ದೇಶದ ಪ್ರಭಾರ ಅಧ್ಯಕ್ಷರಾದ ಡೆಲ್ಸಿ ರೊಡ್ರಿಗಸ್ (Delcy Rodriguez) ಅವರು ಈ ದುರಂತದ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭೂಕಂಪನ ಪೀಡಿತ ಪ್ರದೇಶಗಳಲ್ಲಿ ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಿದ್ದಾರೆ. ತೀವ್ರವಾಗಿ ಹಾನಿಗೊಳಗಾಗಿರುವ ‘ಲಾ ಗ್ವೈರಾ’ (La Guaira) ರಾಜ್ಯದ ಪರಿಸ್ಥಿತಿಯನ್ನು ಕಂಡು ಕಳವಳ ವ್ಯಕ್ತಪಡಿಸಿರುವ ಅವರು, ಈ ಅವಳಿ ಭೂಕಂಪನವನ್ನು “ನಿಜವಾದ ದುರಂತ” (True Tragedy) ಮತ್ತು ಆ ಭಾಗವನ್ನು ಸಂಪೂರ್ಣ ವಿಪತ್ತು ವಲಯ ಎಂದು ಕರೆದಿದ್ದಾರೆ.

ನೂರಕ್ಕೂ ಹೆಚ್ಚು ವರ್ಷಗಳಲ್ಲೇ ಅತ್ಯಂತ ಭೀಕರ ಭೂಕಂಪನ

ಬುಧವಾರ ಸಂಜೆ ವೆನೆಜುವೆಲಾದಲ್ಲಿ ಕೇವಲ ಒಂದು ನಿಮಿಷದ ಅಂತರದಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಮೊದಲನೆಯದು ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ಹೊಂದಿದ್ದರೆ, ಅದರ ಬೆನ್ನಲ್ಲೇ ಸಂಭವಿಸಿದ ಎರಡನೇ ಭೂಕಂಪವು 7.5ರಷ್ಟು ತೀವ್ರತೆಯನ್ನು ದಾಖಲಿಸಿದೆ. ವೆನೆಜುವೆಲಾದ ಇತಿಹಾಸದಲ್ಲಿ ಕಳೆದ ನೂರು ವರ್ಷಗಳಲ್ಲೇ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪನಗಳಲ್ಲಿ ಇದು ಒಂದಾಗಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.

ತೀವ್ರ ಹಾನಿ ಮತ್ತು ರಕ್ಷಣಾ ಕಾರ್ಯಾಚರಣೆ

ಭೂಕಂಪನದ ತೀವ್ರತೆಗೆ ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಡಜನ್‌ಗಟ್ಟಲೆ ವಸತಿ ಸಮುಚ್ಚಯಗಳು ಮತ್ತು ಕಟ್ಟಡಗಳು ನೆಲಸಮಗೊಂಡಿವೆ. ನೂರಾರು ಜನರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮುಖ್ಯ ವಿಮಾನ ನಿಲ್ದಾಣವಾದ ಸಿಮನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀವ್ರ ಹಾನಿಯಾಗಿದ್ದು, ಸದ್ಯಕ್ಕೆ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಕಾರಕಾಸ್ ನಗರದ ಸಬ್‌ವೇ ಮೆಟ್ರೋ ಮತ್ತು ನೈಸರ್ಗಿಕ ಅನಿಲದ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ಜಾಗತಿಕ ನೆರವು

ದುರಂತದ ತೀವ್ರತೆ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಕ್ಕಾಗಿ ಇತರ ದೇಶಗಳಿಂದ ತುರ್ತು ರಕ್ಷಣಾ ತಂಡಗಳು ವೆನೆಜುವೆಲಾಕ್ಕೆ ಆಗಮಿಸುತ್ತಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಪ್ರಮುಖ ನಾಯಕರು ಈ ದುರಂತಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ವೆನೆಜುವೆಲಾಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮಾನವೀಯ ಮತ್ತು ತಾಂತ್ರಿಕ ನೆರವು ನೀಡಲು ಸಿದ್ಧರಾಗಿರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಸಾಗುತ್ತಿವೆ.

Share it :

Leave a Reply

Your email address will not be published. Required fields are marked *