ನ್ಯೂಯಾರ್ಕ್: ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತದ ಕಳವಳವನ್ನು ಪಾಲುದಾರ ರಾಷ್ಟ್ರಗಳು ಸಮರ್ಪಕವಾಗಿ ಅರ್ಥಮಾಡಿಕೊಳ್ಳದಿದ್ದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಅಮೆರಿಕವು ಪಾಕಿಸ್ತಾನದೊಂದಿಗೆ ಮತ್ತೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ಭಾರತಕ್ಕೆ ನಿರ್ದಿಷ್ಟವಾಗಿ ಅತ್ಯಂತ ಮಹತ್ವದ್ದಾಗಿರುವುದು ಭಯೋತ್ಪಾದನೆಯ ವಿಚಾರ. ಹಲವು ದಶಕಗಳಿಂದ ನೆರೆಯ ರಾಷ್ಟ್ರದಿಂದ ಉದ್ದೇಶಪೂರ್ವಕ ನೀತಿಯ ಭಾಗವಾಗಿ ನಾವು ಭಯೋತ್ಪಾದನೆಯನ್ನು ಎದುರಿಸಿದ್ದೇವೆ.
ನಮಗೆ ಇಷ್ಟು ಆಳವಾಗಿ ಮಹತ್ವದ್ದಾಗಿರುವ ವಿಚಾರವೊಂದನ್ನು ಅರ್ಥಮಾಡಿಕೊಳ್ಳದಿದ್ದರೆ, ಅದನ್ನು ಸಮರ್ಪಕವಾಗಿ ಗುರುತಿಸದಿದ್ದರೆ ಅಥವಾ ಅದರ ಬಗ್ಗೆ ಸಹಾನುಭೂತಿ ಇಲ್ಲದಿದ್ದರೆ, ಅದು ಕೂಡ ಸಮಸ್ಯೆಯನ್ನು ಸೃಷ್ಟಿಸುತ್ತದೆ.
ನನ್ನ ಪ್ರಮುಖ ಕಳವಳಗಳಲ್ಲಿ ಒಂದನ್ನು ನನ್ನ ಪಾಲುದಾರ ರಾಷ್ಟ್ರ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದರೆ, ಅದು ಖಂಡಿತವಾಗಿಯೂ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ” ಎಂದು ಭಾರತ-ಅಮೆರಿಕ ಸಂಬಂಧಗಳನ್ನು ಉಲ್ಲೇಖಿಸಿ ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ವಾಷಿಂಗ್ಟನ್ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ಮತ್ತಷ್ಟು ಬೆಸೆಯುತ್ತಿರುವ ಸಂದರ್ಭದಲ್ಲೇ ಜೈಶಂಕರ್ ಅವರ ಈ ಹೇಳಿಕೆ ಬಂದಿದೆ.
ಇದೇ ವೇಳೆ ಭಾರತ ಮತ್ತು ಅಮೆರಿಕವು ಸುಂಕ, ವ್ಯಾಪಾರ ಹಾಗೂ ರಷ್ಯಾದಿಂದ ಭಾರತದ ಇಂಧನ ಖರೀದಿ ಸೇರಿದಂತೆ ಹಲವು ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ.
ಭಾರತ-ಅಮೆರಿಕ ಸಂಬಂಧವು “ಏರುಮುಖದ ಹಾದಿಯಲ್ಲಿ” ಸಾಗಬೇಕು ಎಂಬುದು ಭಾರತದ ಆಶಯವಾಗಿದೆ. ಆದರೆ, ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕಿದೆ ಎಂಬುದನ್ನೂ ಅವರು ಒಪ್ಪಿಕೊಂಡರು.
ಸಂಬಂಧವು ಏರುಮುಖದ ಹಾದಿಯಲ್ಲಿ ಸಾಗಬೇಕು ಎಂದು ನಾವು ಖಂಡಿತವಾಗಿಯೂ ಆಶಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ. ಆದರೆ, ನಾವು ಎದುರಿಸುತ್ತಿರುವ ವಿಚಾರಗಳ ಬಗ್ಗೆ ವಾಸ್ತವಿಕವಾಗಿರಬೇಕು. ಈ ಕೆಲವು ವಿಚಾರಗಳಲ್ಲಿ ನಾವು ಮುಂದುವರಿಯಲು ಸಾಧ್ಯವಾದಷ್ಟು, ನಮ್ಮ ಸಂಬಂಧವೂ ಉತ್ತಮವಾಗಲಿದೆ” ಎಂದು ಹೇಳಿದರು.
ನ್ಯೂಯಾರ್ಕ್ನಲ್ಲಿ ಏಷ್ಯಾ ಸೊಸೈಟಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ ಅವರು, ನೆರೆಯ ರಾಷ್ಟ್ರದಿಂದ ಉದ್ಭವಿಸುವ ಭಯೋತ್ಪಾದನೆ ಭಾರತ ಎದುರಿಸುತ್ತಿರುವ ಪ್ರಮುಖ ಭದ್ರತಾ ಕಳವಳಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಏಷ್ಯಾ ಸೊಸೈಟಿ ಪಾಲಿಸಿ ಇನ್ಸ್ಟಿಟ್ಯೂಟ್ನ ಪ್ರತಿಷ್ಠಿತ ಫೆಲೋ ಹಾಗೂ ಅಮೆರಿಕದ ಮಾಜಿ ರಾಜತಾಂತ್ರಿಕ ಡೇನಿಯಲ್ ರಸೆಲ್ ಸಂವಾದವನ್ನು ನಿರ್ವಹಿಸಿದರು.
ವ್ಯಾಪಾರ ಮತ್ತು ಸುಂಕ ಸೇರಿದಂತೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿರುವ ಸಂದರ್ಭದಲ್ಲಿ ಭಾರತ-ಅಮೆರಿಕ ಸಂಬಂಧಗಳನ್ನು ಮತ್ತೆ “ಉತ್ತಮ ಹಾದಿಗೆ” ತರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಉಭಯ ದೇಶಗಳ ಸಂಬಂಧ ಹಲವು ಸವಾಲುಗಳನ್ನು ಎದುರಿಸಿದೆ ಎಂದು ಹೇಳಿದರು.
“ಪ್ರತಿಯೊಂದು ದೇಶದ ಸೂಕ್ಷ್ಮತೆಗಳಿಗೆ ಸಂಬಂಧಿಸಿದ ವಿಚಾರವೂ ಇದರಲ್ಲಿ ಒಂದಾಗಿದೆ” ಎಂದು ಅವರು ತಿಳಿಸಿದರು.





