ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಒಂದಲ್ಲಾ ಒಂದು ರೀತಿಯಲ್ಲಿ ಕಂಟಕ ಕಾಡುತ್ತಲೇ ಇದ್ದು ಈ ವಿಚಾರ ತಿಳಿದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಇವರು ಕೊಲೆ ಮಾಡಿರುವುದನ್ನು ಸತ್ಯ ಎಂದು ಸಾಬೀತು ಪಡಿಸುವುದಕ್ಕೆ ಸ್ನೇಹಿತರೇ ಸಜ್ಜಾಗಿದ್ದಾರೆ.
ಮತ್ತೊಂದು ಕಡೆ ದರ್ಶನ್ ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಿದ್ದು, ಪ್ರಕರಣದ 14ನೇ ಆರೋಪಿ(ಎ-14) ಪ್ರದೋಷ್ ತನ್ನನ್ನು ‘ಮಾಫಿ ಸಾಕ್ಷಿ’ಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈತನು ದರ್ಶನ್ ಆಪ್ತ ಸ್ನೇಹಿತ ಎನ್ನಲಾಗಿದೆ.
ನಟ ದರ್ಶನ್ ಅವರ ವಿರುದ್ಧ ಸ್ನೇಹಿತರೇ ಸಾಕ್ಷ್ಯ ಹೇಳಲು ನಿರ್ಧರಿಸಿದ್ದು, ಪ್ರಕರಣ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ದೊಡ್ಡ ತಿರುವು ಪಡೆದುಕೊಂಡಿದೆ. ಹೀಗಾಗಿ ಜೈಲಿನಲ್ಲಿರುವ ನಟ ದರ್ಶನ್, ಹಾಗೂ ಪವಿತ್ರಾ ಗೌಡ ಅವರಿಗೆ ಭಾರೀ ಟೆನ್ಶನ್ ಪ್ರಾಋಂಭವಾಗಿದೆ.
ಜಯನಗರದ ಮೈದಾನದಲ್ಲಿ ದರ್ಶನ್ ಪರಿಚಯವಾದ ದಿನದಿಂದ ಹಿಡಿದು ಜೈಲು ಪಾಲಾಗುವವರೆಗಿನ ಇಡೀ ಘಟನಾವಳಿಯನ್ನು ಎಳೆಎಳೆಯಾಗಿ ಸಿಸಿಎಚ್-59 ನ್ಯಾಯಾಧೀಶರ ಮುಂದೆ ಪ್ರದೋಷ್ ಬಿಚ್ಚಿಟ್ಟಿದ್ದಾನೆ. ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿರುವ 11 ಪುಟಗಳ ಕ್ಷಮಾದಾನ ಅರ್ಜಿ(ಮಾಫಿ ಸಾಕ್ಷಿ)ಯಲ್ಲಿ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಪವಿತ್ರ ಗೌಡಗೆ ಈಗ ತಮ್ಮದೇ ಸಹಚರ, ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಆಗುತ್ತಿರುವುದು ದೊಡ್ಡ ಕಂಟಕವಾಗಿದ್ದು, ಪ್ರದೋಷ್ ನೀಡಲಿರುವ ಹೇಳಿಕೆಗೆ ಶತಾಯಗತಾಯ ತಡೆ ನೀಡಲು ದರ್ಶನ್ ಪರ ವಕೀಲರು ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.
ಪ್ರದೋಷ್ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರೆ, ಅದು ದರ್ಶನ್ ಹಾಗೂ ಪವಿತ್ರ ಗೌಡಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗಲಿದೆ. ಈ ಕಾರಣಕ್ಕೆ ಪ್ರದೋಷ್ ಹೇಳಿಕೆ ದಾಖಲಿಸುವುದನ್ನು ತಡೆಹಿಡಿಯಲು ಅಥವಾ ಅದನ್ನು ಸಾಧ್ಯವಾದಷ್ಟು ತಡಮಾಡಲು ದರ್ಶನ್ ತಂಡ ಪ್ಲಾನ್ ಮಾಡಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಪ್ರದೋಷ್ ಹೇಳಿಕೆ ದಾಖಲಾದರೆ ಪ್ರಕರಣ ತನಿಖಾಧಿಕಾರಿಗಳ ಪರ ವಾಲಲಿದೆ.ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಶೀಘ್ರದಲ್ಲೇ ಹೈಕೋರ್ಟ್ ಮೊರೆ ಹೋಗಲು ದರ್ಶನ್ ಕಾನೂನು ತಂಡ ಸಿದ್ಧತೆ ನಡೆಸುತ್ತಿದೆ ಸ್ಫೋಟಕ ವಿವರಗಳನ್ನು ಪ್ರದೋಷ್ ಕೋರ್ಟ್ ಮುಂದೆ ಬಿಚ್ಚಿಟ್ಟರೆ ದರ್ಶನ್ ಮತ್ತು ಪವಿತ್ರ ಗೌಡಗೆ ಜಾಮೀನು ಸಿಗುವುದು ಮತ್ತಷ್ಟು ಕಷ್ಟವಾಗಲಿದೆ.
ಒಟ್ಟಿನಲ್ಲಿ ಈ ಕೇಸ್ ಮತ್ತಷ್ಟು ಟ್ವಿಷ್ಟ್‌ಗೆ ತೆರಳುತ್ತಿರುವುದು ದರ್ಶನ್ ಅಭಿಮಾನಿಗಳಿಗೆ ಶಾಕ್ ಆಗಿದೆ.





