ನವದೆಹಲಿ: ಶಾಂತಿಯುತ ಪ್ರತಿಭಟನೆ ವೇಳೆ ತ್ರಿವರ್ಣ ಧ್ವಜ ಪ್ರದರ್ಶಿಸಿದ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೆಲಸ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಶಾಂತಿಯುತ ಪ್ರತಿಭಟನೆಯ ವೇಳೆ ರಾಷ್ಟ್ರಧ್ವಜ ಪ್ರದರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಕಾಕ್‌ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಾ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವುದು ಅಪರಾಧವಲ್ಲ. ಅದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯ. ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು, ಇಂಡಿಯಾ ಮೈತ್ರಿಕೂಟ ಬೇರೆ ಬೇರೆ ವೇದಿಕೆಗಳಾದರೂ ಹೋರಾಟದ ಉದ್ದೇಶ ಒಂದೇ. ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಕೇಳುತ್ತಿರುವ ನಾಗರಿಕರ ಎಲ್ಲ ಪ್ರತಿಭಟನೆಗಳೂ ಒಂದೇ ಹೋರಾಟದ ಭಾಗವಾಗಿವೆ” ಎಂದು ಅವರು ಹೇಳಿದ್ದಾರೆ.
ಸಿಜೆಪಿ ನಾಯಕರಿಗೆ ನ್ಯಾಯಾಂಗ ಬಂಧನ ವಿಧಿಸುವುದಕ್ಕೂ ಒಂದು ದಿನ ಮೊದಲು, ರಾಹುಲ್ ಗಾಂಧಿ ಆಯೋಜಿಸಿದ್ದ ಚಹಾಕೂಟದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಸಭೆ ಸೇರಿದ್ದರು. ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಹೋರಾಟದ ಮುಂದಿನ ಹಂತಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿತ್ತು.
ಪ್ರಜಾಪ್ರಭುತ್ವದ ಪುನರ್‌ಸ್ಥಾಪನೆಗಾಗಿ ಒಗ್ಗಟ್ಟಿನಿಂದ ಹೋರಾಡಲು ಮತ್ತು ಚುನಾವಣಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ನಿಗದಿಪಡಿಸಲು ವಿಪಕ್ಷ ನಾಯಕರು ನಿರ್ಧರಿಸಿದ್ದಾರೆ. ರಾಜಕೀಯ ಪ್ರತಿರೋಧ ಮುಂದುವರಿಯಲಿದೆ. ಜಂತರ್ ಮಂತರ್ ಅನ್ನು ಪ್ರತಿಭಟನೆ ನಡೆಸುವ ಅಧಿಕೃತ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟಿರುವ ನಿರ್ಧಾರವೂ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ, “ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ಅದನ್ನು ನಾವು ಮರಳಿ ಪಡೆಯುತ್ತೇವೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷವು ಸಿಜೆಪಿ ಮತ್ತು ಅದರ ಪ್ರತಿಭಟನೆಗಳಿಂದ ಅಂತರ ಕಾಯ್ದುಕೊಂಡಿತ್ತು. ಇದೀಗ ಸಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.





