ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆ ದಿನಾಂಕ ಫಿಕ್ಸ್! ಜುಲೈ.23ಕ್ಕೆ ವಿಶ್ವದಾದ್ಯಂತ ರಿಲೀಸ್

ಚೆನ್ನೈ: ಕಳೆದ ಏಳು ತಿಂಗಳುಗಳಿಂದ ಬಿಡುಗಡೆಯ ಭಾಗ್ಯ ಕಾಣದೆ ಕಾನೂನು ಕಸರತ್ತುಗಳಲ್ಲಿ ಸಿಲುಕಿದ್ದ ಕಾಲಿವುಡ್‌ ಸುಪರ್‌ ಸ್ಟಾರ್‌ ವಿಜಯ್‌ ಅವರ ಹೈ-ವೋಲ್ಟೇಜ್‌ ಸಿನಿಮಾ ‘ಜನ ನಾಯಕನ್‌’ (Jana Nayagan) ಕೊನೆಗೂ ರಿಲೀಸ್‌ಗೆ ಹಸಿರು ನಿಶಾನೆ ಪಡೆದುಕೊಂಡಿದೆ. ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿರುವ ಚಿತ್ರತಂಡ, ಜುಲೈ 23 ರಂದು ಜಾಗತಿಕವಾಗಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯೊಂದಿಗಿನ ಸುದೀರ್ಘ ಜಟಾಪಟಿ ಹಾಗೂ ಕೋರ್ಟ್‌ ಮೆಟ್ಟಿಲೇರಿದ್ದ ವಿವಾದಕ್ಕೆ ಈಗ ಪೂರ್ಣವಿರಾಮ ಬಿದ್ದಿದೆ.

ಕೆವಿಎನ್‌ ಪ್ರೊಡಕ್ಷನ್ಸ್‌ ಪವರ್‌ಫುಲ್‌ ಟ್ವೀಟ್‌

ಮಂಗಳವಾರ ನಟ ವಿಜಯ್‌ ಅವರು ತಮ್ಮ ಅಧಿಕೃತ ‘ಎಕ್ಸ್’‌ ಖಾತೆಯಲ್ಲಿ ಚಿತ್ರದ ರಗಡ್‌ ಲುಕ್‌ ಇರುವ ಹೊಸ ಪೋಸ್ಟರ್‌ ಹಂಚಿಕೊಂಡು, “#JanaNayaganFromJuly23” ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಚಿತ್ರದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಕೆವಿಎನ್‌ ಪ್ರೊಡಕ್ಷನ್ಸ್‌ ಸಹ ಟ್ವೀಟ್‌ ಮಾಡಿ, “ಬೆಂಕಿಯ ಪರೀಕ್ಷೆ ಎದುರಿಸಿ, ಕಾಲದ ಜೊತೆ ಹೆಜ್ಜೆಹಾಕಿ ಇತಿಹಾಸ ಬರೆಯಲು ಸಜ್ಜಾಗಿದೆ. ಹೋರಾಟ ಎಷ್ಟು ಕಠಿಣವೋ, ವಿಜಯದ ಧ್ವನಿ ಅಷ್ಟೇ ಜೋರಾಗಿರಲಿದೆ” ಎಂದು ಚಿತ್ರದ ಸವಾಲುಗಳ ಜರ್ನಿಯನ್ನು ಬಣ್ಣಿಸಿದೆ. ವಿಜಯ್‌ ರಾಜಕೀಯಕ್ಕೆ ಕಾಲಿಡುವ ಮುನ್ನ ಬರುತ್ತಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಹೈಕೋರ್ಟ್‌ ಮೆಟ್ಟಿಲೇರಿದ್ದ ಪೊಂಗಲ್‌ ರೇಸ್‌ನ ಸಿನಿಮಾ

ನಿಜ ಪ್ರಕಟಣೆಯ ಪ್ರಕಾರ ಈ ಚಿತ್ರ ಈ ವರ್ಷದ ಜನವರಿ 9 ರಂದೇ ಪೊಂಗಲ್‌ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್‌ ಪ್ರಮಾಣಪತ್ರದ ಗೊಂದಲದಿಂದಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ಹಲವು ಬಾರಿ ವಿಚಾರಣೆ ನಡೆದು ಸಿನಿಮಾ ತಡವಾಗಿತ್ತು. ಇತ್ತೀಚೆಗಷ್ಟೇ ಸೆನ್ಸಾರ್‌ ಮಂಡಳಿಯಿಂದ ಚಿತ್ರಕ್ಕೆ ‘ಎ’ (A) ಸರ್ಟಿಫಿಕೇಟ್‌ ಸಿಕ್ಕ ಬೆನ್ನಲ್ಲೇ ಜುಲೈ 23ರ ಹೊಸ ಡೇಟ್‌ ಲಾಕ್‌ ಮಾಡಲಾಗಿದೆ.

ಸ್ಟಾರ್‌ ತಾರಾಗಣದ ಬಿಗ್‌ ಬಜೆಟ್‌ ಮೂವಿ

ಹೆಚ್‌. ವಿನೋತ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಸಾಥ್‌ ನೀಡಿದ್ದಾರೆ. ಇವರ ಜೊತೆಗೆ ಬಾಲಿವುಡ್‌ ನಟ ಬಾಬಿ ಡಿಯೋಲ್‌, ಮಮಿತಾ ಬೈಜು, ಪ್ರಕಾಶ್ ರಾಜ್‌, ಗೌತಮ್‌ ವಾಸುದೇವ್ ಮೆನನ್‌, ಪ್ರಿಯಾಮಣಿ ಹಾಗೂ ನರೇನ್‌ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್‌ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಕಾನೂನಿನ ಎಲ್ಲಾ ತೊಡಕುಗಳಿಂದ ಮುಕ್ತಿ ಪಡೆದಿರುವ ಚಿತ್ರತಂಡ, ಈ ಬಿಡುಗಡೆಯನ್ನು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಬ್ಬವನ್ನಾಗಿ ಮಾಡಲು ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

Share it :

Leave a Reply

Your email address will not be published. Required fields are marked *