24 ಸೆಪ್ಟೆಂಬರ್ ಇಸ್ರೋದ ಐತಿಹಾಸಿಕ ಮಂಗಳಯಾನ ಯಶಸ್ಸು ದಿನ.PSLV ರಾಕೆಟ್ ಕೇವಲ ರಾಕೆಟ್ ಅಲ್ಲ, ಇದು 250 ವರ್ಷದ ಕನ್ನಡ ನಾಡಿನ ತಂತ್ರಜ್ಞಾನದ ಮುಂದುವರಿಕೆಯಾಗಿದ್ದು, ಜಗತ್ತಿನ ಮೊದಲ ಯುದ್ಧ ರಾಕೆಟ್ ಹುಟ್ಟಿದ್ದು ಮೈಸೂರಿನಲ್ಲಿ (1780) ಎಂದು ತಿಳಿದು ಬಂದಿದೆ.
ರಾಕೆಟ್ ತಂತ್ರಜ್ಞಾನದ ಮೂಲ ಚೀನಾ ಎಂದು ಎಲ್ಲರೂ ತಿಳಿದಿದ್ದಾರೆ. ಚೀನೀಯರು 13ನೇ ಶತಮಾನದಲ್ಲಿ ರಟ್ಟಿನ (cardboard) ಕೊಳವೆಯಲ್ಲಿ ಗನ್ಪೌಡರ್ ತುಂಬಿ ಹಾರಿಸುತ್ತಿದ್ದರು. ಆದರೆ ಅದು ಪಟಾಕಿಯಂತೆ, ಹೆಚ್ಚು ದೂರ ಹೋಗುತ್ತಿರಲಿಲ್ಲ, ನಿಜವಾದ ಕ್ರಾಂತಿ ಆಗಿದ್ದು ನಮ್ಮ ಮೈಸೂರಿನಲ್ಲಿ ಎನ್ನಲಾಗಿದೆ.
ಮೈಸೂರು ಸಂಸ್ಥಾನದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಮೊದಲ ಬಾರಿಗೆ ಜಗತ್ತಿನಲ್ಲೇ ಕಬ್ಬಿಣದ ಕೊಳವೆಯ (Iron Cased) ಒಳಗೆ ಗನ್ಪೌಡರ್ ತುಂಬಿ, 2 ಕೆಜಿ ಸ್ಫೋಟಕದೊಂದಿಗೆ 1.5 ರಿಂದ 2 ಕಿಲೋಮೀಟರ್ ದೂರ ಹೋಗುವ ರಾಕೆಟ್ ಅನ್ನು ಕಂಡುಹಿಡಿದರು ಇದಕ್ಕೆ 8 ಅಡಿ ಬಿದಿರು ಕೋಲು ಮತ್ತು ಮುಂದೆ ಕತ್ತಿಯನ್ನು ಕಟ್ಟಲಾಗುತ್ತಿತ್ತು.ಇದನ್ನು ‘ಮೈಸೂರು ರಾಕೆಟ್’ ಎಂದು ಕರೆಯಲಾಗುತ್ತದೆ. ಈ ರಾಕೆಟ್ಗಳು ಹಿಂದಿನ ರಾಕೆಟ್ಗಳಿಗಿಂತ ಹೆಚ್ಚು ಒತ್ತಡವನ್ನು ತಡೆದುಕೊಳ್ಳುತ್ತಿದ್ದವು, ಹೆಚ್ಚು ದೂರ ಹೋಗುತ್ತಿದ್ದವು ಮತ್ತು ದಾಳಿ ಮಾಡುತ್ತಿದ್ದವು. 1780 ರಲ್ಲಿ ನಡೆದ ಪೊಲ್ಲಿಲೂರು ಕದನದಲ್ಲಿ ಟಿಪ್ಪು ತನ್ನ ರಾಕೆಟ್ ಪಡೆಯಿಂದ ಬ್ರಿಟಿಷ್ ಸೇನೆಯ ಮದ್ದಿನ ಗೋದಾಮನ್ನೇ ಸ್ಫೋಟಿಸಿ, ಬ್ರಿಟಿಷರಿಗೆ ಭಾರತದಲ್ಲೇ ಅತ್ಯಂತ ಅವಮಾನಕರ ಸೋಲುಣಿಸಿದರು.ಇದು ರಾಕೆಟ್ ಇತಿಹಾಸದ ಟರ್ನಿಂಗ್ ಪಾಯಿಂಟ್ ಆಗಿದೆ.
ಬ್ರಿಟಿಷರು ನಮ್ಮ ತಂತ್ರಜ್ಞಾನ ಕದ್ದಿದ್ದು ಹೇಗೆ? : 1799 ರಲ್ಲಿ ಟಿಪ್ಪು ಹುತಾತ್ಮನಾದ ನಂತರ ಬ್ರಿಟಿಷರು ಶ್ರೀರಂಗಪಟ್ಟಣದಲ್ಲಿ 600 ಲಾಂಚರ್ ಮತ್ತು 9000 ರಾಕೆಟ್ಗಳನ್ನು ವಶಪಡಿಸಿಕೊಂಡು ಲಂಡನ್ನ Royal Woolwich Arsenal ಗೆ ಸಾಗಿಸಿದರು.ಅಲ್ಲಿ ಬ್ರಿಟಿಷ್ ವಿಜ್ಞಾನಿ ಸರ್ ವಿಲಿಯಂ ಕಾಂಗ್ರೀವ್ ಅದನ್ನೇ ನಕಲು ಮಾಡಿ ‘ಕಾಂಗ್ರೀವ್ ರಾಕೆಟ್’ ಮಾಡಿದರು. ಈ ರಾಕೆಟ್ಗಳನ್ನು 1814 ರಲ್ಲಿ ಅಮೆರಿಕದ ವಿರುದ್ಧ ಬಳಸಿದರು. ಆ ರಾಕೆಟ್ಗಳ ಕೆಂಪು ಬೆಳಕನ್ನು ನೋಡಿಯೇ ಅಮೆರಿಕದ ರಾಷ್ಟ್ರಗೀತೆಯಲ್ಲಿ “And the rockets’ red glare” ಎಂದು ಬರೆಯಲಾಗಿದೆ.ಬ್ರಹ್ಮೋಸ್ ಮುಖ್ಯಸ್ಥ ಡಾ. ಎ. ಶಿವತನು ಪಿಳ್ಳೈ ಅವರು ಹೇಳಿದಂತೆ “ಮೈಸೂರು ರಾಕೆಟ್ಗಳೇ ಇಂದಿನ ಕ್ಷಿಪಣಿ ತಂತ್ರಜ್ಞಾನದ ಮೂಲ” ಶಿವಮೊಗ್ಗದ ಬಿದನೂರು ಕೋಟೆ ಬಾವಿಯಲ್ಲಿ ಸಿಕ್ಕ 1000 ಕ್ಕೂ ಹೆಚ್ಚು ಕಬ್ಬಿಣದ ರಾಕೆಟ್ಗಳು ಇದಕ್ಕೆ ಸಾಕ್ಷಿಯಾಗಿದೆ.
164 ವರ್ಷಗಳ ನಂತರ ಭಾರತದಲ್ಲಿ ರಾಕೆಟ್ ಮತ್ತೆ ಹಾರಿದ್ದು, ಟಿಪ್ಪು ನಂತರ ಭಾರತ ರಾಕೆಟ್ ಮರೆತೇ ಬಿಟ್ಟಿತು. 1963 ರ ವರೆಗೆ ಯಾವುದೇ ರಾಕೆಟ್ ಹಾರಲಿಲ್ಲ.21 ನವೆಂಬರ್1963 ರಂದು ಡಾ. ವಿಕ್ರಮ್ ಸಾರಾಭಾಯಿ ಅವರು ತಿರುವನಂತಪುರಂನ ತುಂಬಾ ಮೀನುಗಾರ ಗ್ರಾಮದ St Mary Magdalene ಚರ್ಚ್ ಅನ್ನು ರಾಕೆಟ್ ಕೇಂದ್ರವನ್ನಾಗಿ ಮಾಡಿದರು. ಚರ್ಚಿನ ಬಲಿಪೀಠವೇ ಕಂಟ್ರೋಲ್ ರೂಮ್, ಬಿಷಪ್ ಮನೆಯೇ ವರ್ಕ್ಶಾಪ್ ಆಯಿತು. ಅಲ್ಲಿಂದ ಭಾರತದ ಮೊದಲ ಸೌಂಡಿಂಗ್ ರಾಕೆಟ್ ಹಾರಿತು. ಈ ಚರ್ಚ್ ಇಂದಿಗೂ ರಾಕೆಟ್ ವಿಜ್ಞಾನಿಗಳಿಗೆ ಪವಿತ್ರ ಸ್ಥಳವಾಗಿದೆ.
ಅಲ್ಲಿಂದ ಇಸ್ರೋ ಪಯಣ:SLV (1979-80): ಮೊದಲ ಸೋಲು, ನಂತರ ಯಶಸ್ಸ PSLV: 1994 ರಿಂದ ವರ್ಕ್ಹಾರ್ಸ್ PSLV-C25 2013 ನವೆಂಬರ್ 5 ರಂದು ಮಂಗಳಯಾನ ಹೊತ್ತೊಯ್ದ ರಾಕೆಟ್ ಆಗಿದ್ದು,GSLV Mk-III: ಈಗ ಚಂದ್ರಯಾನ-3, ಗಗನಯಾನದ ಆಧಾರವಾಗಿದೆ.
ಮಂಗಳಯಾನ ಜಗತ್ತು ಬೆರಗಾದ ದಿನ 24 ಸೆಪ್ಟೆಂಬರ್ , 2014 ಆಗಿದೆ.ದಿನಾಂಕ 5 ನವೆಂಬರ್ 2013 ರಂದು ಹೊರಟ ಮಂಗಳಯಾನ ನೌಕೆ 298 ದಿನಗಳು, 78 ಕೋಟಿ ಕಿ.ಮೀ ಪಯಣಿಸಿ,ಸೆಪ್ಟೆಂಬರ್ 24, 2014 ಬೆಳಿಗ್ಗೆ 7:17 ಕ್ಕೆ ಮಂಗಳನ ಕಕ್ಷೆ ಸೇರಿತು.ಇಲ್ಲಿಯವರೆಗೆ 51 ಪ್ರಯತ್ನಗಳಲ್ಲಿ 21 ಮಾತ್ರ ಯಶಸ್ವಿ. ಅಮೆರಿಕ, ರಷ್ಯಾ ಮೊದಲ ಪ್ರಯತ್ನದಲ್ಲಿ ವಿಫಲ. ಆದರೆ ಭಾರತ ಮೊದಲ ಪ್ರಯತ್ನದಲ್ಲೇ ಮಂಗಳನನ್ನು ತಲುಪಿದ ವಿಶ್ವದ ಮೊದಲ ದೇಶವಾಯಿತು. ಅಮೆರಿಕ, ರಷ್ಯಾ, ಯುರೋಪ್ ನಂತರ 4ನೇ ಸಂಸ್ಥೆ ಎಂಬ ಹೆಗ್ಗಳಿಕೆಯಾಗಿದೆ.
ವೆಚ್ಚ ಕೇವಲ 450 ಕೋಟಿ ರೂ (74 ಮಿಲಿಯನ್ ಡಾಲರ್) ಅಮೆರಿಕದ MAVEN ಮಿಷನ್ಗೆ 671 ಮಿಲಿಯನ್ ಡಾಲರ್ ಖರ್ಚಾಗಿತ್ತು. ಅಂದರೆ 9 ಪಟ್ಟು ಕಡಿಮೆ. ಹಾಲಿವುಡ್ನ ‘ಗ್ರಾವಿಟಿ’ ಸಿನಿಮಾ ಬಜೆಟ್ಗಿಂತ ಕಡಿಮೆಯಾಗಿದ್ದು,6 ತಿಂಗಳು ಬಾಳಿಕೆ ಎಂದುಕೊಂಡಿದ್ದ ನೌಕೆ 8 ವರ್ಷ (2022 ಅಕ್ಟೋಬರ್ ವರೆಗೆ) ಕೆಲಸ ಮಾಡಿ ಫೋಬೋಸ್, ಡೀಮೋಸ್ ಚಂದ್ರರ ಫೋಟೋ ಕಳುಹಿಸಿತು.
ಸಮಾಜಕ್ಕೆ ಸಂದೇಶ:
ನಾವು ಸೃಷ್ಟಿಕರ್ತರು: ರಾಕೆಟ್ ಮೂಲ ನಮ್ಮ ಮಣ್ಣಿನಲ್ಲಿ ಇದೆ.
ಕಡಿಮೆ ಖರ್ಚಿನಲ್ಲಿ ದೊಡ್ಡ ಕನಸು: 450 ಕೋಟಿಯಲ್ಲಿ ಮಂಗಳ ಸಾಧ್ಯ ಎಂದು ಇಸ್ರೋ ತೋರಿಸಿದೆ.
ಸೋಲಿನಿಂದ ಗೆಲುವು: 1799 ರ ಸೋಲು, 1979 ರ SLV ಸೋಲು ನಮ್ಮನ್ನು ತಡೆಯಲಿಲ್ಲ.
ವಿಜ್ಞಾನಕ್ಕೆ ಜಾತಿ ಇಲ್ಲ: ಟಿಪ್ಪು, ಸಾರಾಭಾಯಿ, ಕಲಾಂ ಎಲ್ಲರೂ ಒಂದೇ ಆಗಿದ್ದಾರೆ.
ಈ ದಸರಾ ಮಕ್ಕಳಿಗೆ ಪಟಾಕಿ ಜೊತೆಗೆ ಈ ಕಥೆ ಹೇಳಿ. ಪಟಾಕಿ ಒಂದು ಕ್ಷಣ ಬೆಳಗುತ್ತದೆ, ಈ ಕಥೆ ಜೀವನವಿಡೀ ಬೆಳಗುತ್ತದೆ. ಮೈಸೂರು ರಾಕೆಟ್ನಿಂದ ಮಂಗಳ ರಾಕೆಟ್ವರೆಗೆ ಇದು ಕನ್ನಡಿಗರ ಹೆಮ್ಮೆ! ಎಂದು ಶ್ರೀರಂಗಪಟ್ಟಣದ ಸಮರ್ಪಣ ಟ್ರಸ್ಟ್ ಸಂಭ್ರಮಿಸುತ್ತಿದೆ ಎಂದು ಕೆ ಎಸ್ ಜಯಶಂಕರ್ ಹೇಳಿದ್ದಾರೆ.





