ವಿಜಯಪುರ: ಕೇಂದ್ರ ಸರ್ಕಾರದಲ್ಲಿರುವ ರಂಗಾ ಬಿಲ್ಲಾ ಜೋಡಿಯಾಗಿದ್ದಾರೆ ಎಂದು ಮೋದಿ, ಶಾ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿಎಸ್ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ನಟ ಪ್ರಕಾಶ ರಾಜ್ ಭಾಗಿಯಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ, ಸತ್ತಿದ್ದಾರೆ ಎಂದು ಮತ ಡಿಲೀಟ್ ಆಗಿರುವ ವ್ಯಕ್ತಿಗಳು ಅಳಲು ತೋಡಿಕೊಂಡರು. ಈ ವಿಚಾರವಾಗಿ ನಟ ಪ್ರಕಾಶ್ ರಾಜ್ ಮಾತನಾಡಿ, ಎಲ್ಲರನ್ನೂ ಹೊರಗೆ ಹಾಕುವ ಯೋಜನೆ ಇದರ ಹಿಂದೆ ಇದೆ ಎಂದು ಕಿಡಿಕಾರಿದ್ದಾರೆ
ಮನುಷ್ಯ ಬದುಕಿದ್ದಾನೆ. ಆದರೆ ಎಸ್ ಐ ಆರ್ ನಲ್ಲಿ ಅವರು ಮರಣ ಹೊಂದಿದ್ದಾರೆ. ಈ ರೀತಿಯಾಗಿ ಮತ ಡಿಲೀಟ್ ಮಾಡಲಾಗುತ್ತಿದೆ. ಎಲೆಕ್ಷನ್ ಕಮಿಷನ್ ಕೂಡಾ ಈ ವಿಚಾರದಲ್ಲಿ ಒಮ್ಮತವಿಲ್ಲ ಎಂದು ಜ್ಞಾನೇಶಕುಮಾರ್ ಒಬ್ಬ ಕಳ್ಳ ಎಂದು ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ನಾವು ಸಿಎಂ ಡಿಕೆ ಶಿವಕುಮಾರ್ ಬಳಿ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಭಾರತದಲ್ಲಿ ಎಲ್ಲರನ್ನೂ ಮತದಾರನ್ನಾಗಿ ಈ ಹಿಂದೆ ಮಾಡಲಾಗಿತ್ತು. 400 ಪಾರ್ ಅಂದವರು 240ಗೆ ಇಳಿದಿರುವುದು ಅವರ ಭಯಕ್ಕೆ ಕಾರಣವಾಗಿದೆ ಎಂದಿದ್ದಾರೆ.
ದೇಶದಲ್ಲಿ ಎನ್ ಆರ್ ಸಿ ಯನ್ನು ಎಸ್ ಐ ಆರ್ ಮೂಲಕ ಜಾರಿಗೆ ತರುತ್ತಿದ್ದಾರೆ. ರಂಗ ಬಿಲ್ಲಾ ಗ್ಯಾಂಗ್ ಪ್ರಜಾಪ್ರಭುತ್ವವನ್ನ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಬಾರದು. ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ನಮ್ಮ ಹೋರಾಟ ಎಂದಿದ್ದಾರೆ.
ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಕೈ ಬಿಟ್ಟರೆ ಇವರ ಕಥೆ ಗೊತ್ತಾಗುತ್ತದೆ. ಕರ್ನಾಟಕ ಪಶ್ಚಿಮ ಬಂಗಾಳ ಆಗೋಕೆ ಬಿಡಲ್ಲ. ಜ್ಞಾನೇಶಕುಮಾರ್, ರಂಗಾ ಬಿಲ್ಲಾ ನೀವು ಸಿಕ್ಕಿಹಾಕಿಕೊಂಡಿದ್ದಿರಾ. ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ದೇಶದಲ್ಲಿ ಆದಿವಾಸಿಗಳು, ದಲಿತರು, ಮುಸಲ್ಮಾನರ ಮತಗಳನ್ನ ಡಿಲೀಟ್ ಮಾಡಲಾಗುತ್ತಿದೆ. ದೇಶವನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಮನುಸ್ಮೃತಿ ಜಾರಿಗೆ ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಫಾರ್ಮ್ ನಂಬರ್ 7 ದುರ್ಬಳಕೆ ಆಗುತ್ತಿದೆ. ಬಿಜೆಪಿ ನಾಯಕರು, ಯುವ ಮೋರ್ಚಾ ಮುಖಂಡರು ಫಾರ್ಮ್ ನಂಬರ್ 7 ದುರ್ಬಳಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಮೋದಿ ಅಮಿತ್ ಶಾ ಏನೂ ಬೇಕಾದರೂ ಮಾಡುತ್ತಾರೆ ಅಂತ ನಮಗೆ ಗೊತ್ತಿತ್ತು ಎಂದಿದ್ದಾರೆ. ಈ ಹಿಂದೆ ಬಿಹಾರ, ಪಶ್ಚಿಮ ಬಂಗಾಳದಲ್ಲಿ ಇದರ ಅವಾಂತರ ನೋಡಿದ್ದೇವೆ. ಟ್ರಿಬುನಲ್ ರಚನೆ ಮಾಡಿ ಡಿಲೀಟ್ ಆಗಿರುವ ಮತಗಳ ಬಗ್ಗೆ ತನಿಖೆ ಮಾಡಿದೆ. ಇದೀಗ ಕರ್ನಾಟಕಕ್ಕೆ ಎಸ್ ಐ ಆರ್ ಬಂದಿದೆ. 1 ಕೋಟಿ 8 ಲಕ್ಷ ಮತಗಳಿಗೆ ಆತಂಕ ಶುರುವಾಗಿದೆ. ಬಿ ಎಲ್ ಓಗಳು ಸರಿಯಾಗಿ ಮನೆ ಮನೆಗೆ ಹೋಗಿಲ್ಲ ಎಂದಿದ್ದಾರೆ.





