ಮುಖ್ಯಮಂತ್ರಿ ಭರವಸೆ ನೀಡಿದ್ದಂತೆ ರೈತರಿಗೆ ಇನ್ನೂ ರೂ.2,500 ಬಿಡುಗಡೆ ಮಾಡಿಲ್ಲ : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಹಾಸನ : ಮುಖ್ಯಮಂತ್ರಿ ಭರವಸೆ ನೀಡಿದ್ದಂತೆ ರೈತರಿಗೆ ಇನ್ನೂ ರೂ.2,500 ಬಿಡುಗಡೆ ಮಾಡಿಲ್ಲ, ಪ್ರತಿವರ್ಷ ರೂ.40,000 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ ಎನ್ನಲಾದರೂ ಸಮಾಜ ಕಲ್ಯಾಣ ಇಲಾಖೆಯ ಬಹುತೇಕ ವಿದ್ಯಾರ್ಥಿನಿಲಯಗಳು ದುಸ್ಥಿತಿಯಲ್ಲಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ, ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸ್ಟಿಂಗ್ ಆಪರೇಷನ್ ಬಗ್ಗೆಯೇ ಚಿಂತಿಸುತ್ತಿದ್ದಾರೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪ ಎದುರಿಸುತ್ತಿರುವ ಕೆ.ಎಸ್. ಲತಾ ಕುಮಾರಿ ಅವರನ್ನು ಅಮಾನತುಗೊಳಿಸುವ ಬದಲು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಟೀಕಿಸಿದರು.

ಕುಟುಕು ಕಾರ್ಯಾಚರಣೆ ನಡೆಸಲು ಬಂದಿದ್ದರು ಎನ್ನಲಾದ ಐವರನ್ನು ಮುಖ್ಯಮಂತ್ರಿ ತಮ್ಮ ಕಚೇರಿಯಿಂದ ಬಂಧಿಸದೆ ಬಿಟ್ಟಿದ್ದಾರೆ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್‌ಗಳ ನೇಮಕಾತಿ ಪತ್ರಗಳನ್ನು ನೀಡಲು ಲಂಚ ಕೇಳಿರುವ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಎಂಜಿನಿಯರ್‌ಗಳ ನಡುವಿನ ಸಂಭಾಷಣೆಗಳಿರುವ ಪೆನ್‌ಡ್ರೈವ್ ತಮ್ಮ ಬಳಿ ಇದೆ ಎಂದು ಹೇಳಿಕೊಂಡರು. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಪೈಕಿ ಯಾವುದಕ್ಕೂ ಮುಖ್ಯಮಂತ್ರಿ ಇನ್ನೂ ಸ್ಪಷ್ಟನೆ ನೀಡಿಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲಾಧಿಕಾರಿಯವರು ಚುನಾಯಿತ ಪ್ರತಿನಿಧಿಗಳೊಂದಿಗೆ ಹೇಗೆ ವರ್ತಿಸಬೇಕು, ವ್ಯವಹರಿಸಬೇಕು ಮತ್ತು ಜಿಲ್ಲಾ ಆಡಳಿತವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದಿರಬೇಕು ಎಂದು ಹೇಳಿದರು.

ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಬರ ಪರಿಸ್ಥಿತಿಗಿಂತಲೂ ಕುಟುಕು ಕಾರ್ಯಾಚರಣೆಯ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಟೀಕಿಸಿದರು.

ಕುಟುಕು ಕಾರ್ಯಾಚರಣೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಈ ಹೇಳಿಕೆಯು ಯಾವುದೇ ತಂತ್ರ ಅನುಸರಿಸಿಯಾದರೂ ಹಣ ಸಂಪಾದಿಸುವಂತೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಿದೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮತ್ತು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ನಡುವಿನ ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಮೇಲೆ ಸಚಿವರಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ಹೇಳಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post