ಇಂದು ಒಳಪಂಗಡಗಳ ಹೆಸರಿನಲ್ಲಿ ಲಿಂಗಾಯತ ಧರ್ಮ ಹರಿದು ಹಂಚಿ ಹೋಗಿದೆ: ಸಚಿವ ಎಂ.ಬಿ ಪಾಟೀಲ್ ಖೇದ

ಬೆಂಗಳೂರು: ವೀರಶೈವ ಲಿಂಗಾಯತ ಧರ್ಮವು ಮೂಲತಃ ಜಾತಿರಹಿತವಾದ ಧರ್ಮವಾಗಿದೆ. ಆದರೆ ಈ ಧರ್ಮವು ಇಂದು ಒಳಪಂಗಡಗಳ ಹೆಸರಿನಲ್ಲಿ ಹರಿದು ಹಂಚಿಹೋಗಿದೆ. ಈ ವಿದ್ಯಮಾನದ ಬಗ್ಗೆ ಸಮುದಾಯದ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಮುದಾಯದ ಹಿರಿಯ ಮುಖಂಡ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕರೆ ಕೊಟ್ಟಿದ್ದಾರೆ.

ಅವರು ಮಂಗಳವಾರ ಇಲ್ಲಿ ಆರಂಭವಾದ ಎರಡು ದಿನಗಳ 14ನೇ ಶರಣ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಈ ಸಮ್ಮೇಳನವನ್ನು ಇಲ್ಲಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಏರ್ಪಡಿಸಿದ್ದು, ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪನವರು ಸರ್ವಾಧ್ಯಕ್ಷರಾಗಿದ್ದಾರೆ.

ಶರಣ ಸಾಹಿತ್ಯ ಮತ್ತು ಶರಣ ಧರ್ಮಕ್ಕೆ ಬಹಳ ಒಳ್ಳೆಯ ಬುನಾದಿ ಇದೆ. ಹಾಗೆ ನೋಡಿದರೆ, ವೃತ್ತಿಗೆ ತಕ್ಕ ಘನತೆ ಎನ್ನುವ ತತ್ತ್ವವನ್ನು ಬಸವಣ್ಣನವರು ಕಾರ್ಲ್ ಮಾರ್ಕ್ಸ್ ಗಿಂತ ನಾಲ್ಕು ಶತಮಾನ ಮೊದಲೇ ಹೇಳಿ, ಇಡೀ ಸಮಾಜಕ್ಕೆ ಕಾಯಕ-ದಾಸೋಹ ಸಂದೇಶ ನೀಡಿದರು. ಆದರೆ, ಲಿಂಗಾಯತ ಧರ್ಮಕ್ಕೆ ಮೊದಲಿನಿಂದಲೂ ಸಮುದಾಯದ ಒಳಗೇ ವಿಪರೀತ ಶತ್ರುಗಳಿದ್ದಾರೆ. ಹೀಗಾಗಿ ಬಸವಾದಿ ಶರಣರು ಮತ್ತು ಲಿಂಗಾಯತ ಧರ್ಮಗಳ ಸೀಮೋಲ್ಲಂಘನೆ ಆಗದೆ, ಕರ್ನಾಟಕದಲ್ಲೇ ಸೀಮಿತವಾಗಿ ಉಳಿದುಕೊಂಡವು ಎಂದು ಅವರು ಹೇಳಿದ್ದಾರೆ.

ಭಾರತೀಯರಾದ ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ಇದರ ವ್ಯಾಪ್ತಿಯಲ್ಲೇ ಬರುವ ಮತ್ತು ಭಾರತದಲ್ಲೇ ಹುಟ್ಟಿದ ಜೈನ, ಸಿಖ್ ಮತ್ತು ಬೌದ್ಧ ಧರ್ಮಗಳು ಪ್ರತ್ಯೇಕ ಧರ್ಮಗಳಾಗಿವೆ. ಹೀಗಿರುವಾಗ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡುವುದರಿಂದ ಹಿಂದೂ ಧರ್ಮಕ್ಕೆ ಯಾವ ಅಪಾಯವೂ ಇಲ್ಲ. ಆದರೂ ನಮ್ಮವರೇ ಕೆಲವರು ಇದಕ್ಕೆ ಅಡ್ಡಿಯಾಗಿದ್ದು, ಹುಯಿಲೆಬ್ಬಿಸುತ್ತಿದ್ದಾರೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಜನಗಣತಿಯ ಸಂದರ್ಭದಲ್ಲಿ ಲಿಂಗಾಯತ ಒಳಪಂಗಡಗಳ ಪೈಕಿ ಹೆಚ್ಚಿನವರು ಮೀಸಲಾತಿ ಸಿಗುತ್ತದೆಂದು ಹಿಂದೂ ಬಣಜಿಗ, ಹಿಂದೂ ಕುಡುಒಕ್ಕಲಿಗ, ಹಿಂದೂ ನೊಳಂಬ ಹೀಗೆ ಉಪಜಾತಿಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಲಿಂಗಾಯತರ ಜನಸಂಖ್ಯೆಯು ರಾಜ್ಯದಲ್ಲಿ ಶೇಕಡ 17-18ರಿಂದ ಶೇಕಡ 11ರ ಆಸುಪಾಸಿಗೆ ಇಳಿದಿದೆ ಎಂದು ಅವರು ನುಡಿದಿದ್ದಾರೆ.

ಲಿಂಗಾಯತರು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಬಸವಣ್ಣನನ್ನೇ ಕಾಲ್ಪನಿಕ ಅಂತಲೂ ಕೆಲವರು ಹೇಳಬಹುದು ಎಂದು ಇತ್ತೀಚೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ. ಇದು ನಮ್ಮ ಪರಿಸ್ಥಿತಿ. ಇನ್ನಾದರೂ ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು. ಬಸವಣ್ಣನ ಆಗಮನಕ್ಕೆ ಮುಂಚೆ ನಾವು ಕೂಡ ಶೂದ್ರರಾಗಿದ್ದೆವು ಎನ್ನುವುದನ್ನು ಮರೆಯಬಾರದು. ಆದರೆ ಸಂಸ್ಕೃತದ ಯಜಮಾನಿಕೆಯನ್ನು ಮುರಿದು, ದೇವರ ಜತೆ ಕನ್ನಡದಲ್ಲೇ ಮಾತನಾಡಿದ ಮತ್ತು ಕನ್ನಡದ ಧರ್ಮ ಲಿಂಗಾಯತವೊಂದೇ ಎಂದು ಪಾಟೀಲ ಬಣ್ಣಿಸಿದ್ದಾರೆ.

ಸಮ್ಮೇಳನದಲ್ಲಿ ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ , ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳಾನಧ್ಯಕ್ಷರಾಗಿದ್ದ ಬೀದರಿನ ಸಿದ್ಧರಾಮ ಬೆಲ್ದಾಳ ಶರಣರು, ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ, ಮಾಜಿ ಉಪ ಮೇಯರ್ ಪುಟ್ಟರಾಜು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿ: ಗೊರುಚ

ಲಿಂಗಾಯತ ಧರ್ಮಕ್ಕೆ ಕೇಂದ್ರ ಸರಕಾರವು ಶಾಸನಬದ್ಧವಾಗಿ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಬೇಕು ಮತ್ತು ವಚನಗಳನ್ನು ಇಡೀ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಇದುವರೆಗೂ ಕೇವಲ ಭರವಸೆಯಾಗಿ ಉಳಿದಿರುವ ವಚನ ವಿಶ್ವವಿದ್ಯಾಲಯವನ್ನು ತ್ವರಿತವಾಗಿ ಸ್ಥಾಪಿಸಬೇಕು ಎಂದು 14ನೇ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಒಳ್ಳೆಯ ಕ್ರಮವಾಗಿದೆ. ಆದರೆ ಇದರ ನಂತರ ಮುಂದಕ್ಕೆ ಏನೂ ಕೆಲಸವಾಗಿಲ್ಲ. ಸರಕಾರವು ಇತ್ತ ಕಡೆಗೆ ಗಮನ ಹರಿಸಬೇಕು. ಮುಖ್ಯವಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಶರಣಾದಿಗಳ ಹೆಸರನ್ನು ಇಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others