VTU ಹೊಸ ದಾಖಲೆ: ಪರೀಕ್ಷೆ ಮುಗಿದ 5 ನಿಮಿಷದಲ್ಲೇ ಫಲಿತಾಂಶ ಪ್ರಕಟ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) 6ನೇ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 5 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಫಲಿತಾಂಶವನ್ನು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಕುಲಸಚಿವ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್ ಹಾಗೂ ಕುಲಸಚಿವ ಡಾ.ಪ್ರಸಾದ ಬಿ. ರಾಂಪುರೆ ಜಂಟಿಯಾಗಿ ಬಿಡುಗಡೆ ಮಾಡಿದರು. ಆ ಮೂಲಕ ಈ ಹಿಂದೆ ಸೃಷ್ಟಿಸಿದ್ದ ಎಲ್ಲಾ ದಾಖಲೆಗಳನ್ನು ವಿಟಿಯು ಮುರಿದಿದೆ.

ಬಿ.ಇ. ಮತ್ತು ಬಿ.ಟೆಕ್ 6ನೇ ಸೆಮಿಸ್ಟರ್ ಪರೀಕ್ಷೆಗೆ 60,856 ವಿದ್ಯಾರ್ಥಿಗಳು ಹಾಜರಾಗಿದ್ದರು. ಮಂಗಳವಾರ ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5.35ಕ್ಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು 21 ದಿನಗಳ ಮುಂಚಿತವಾಗಿಯೇ ಮುಗಿಸಿದೆ. ಒಟ್ಟು 76.84 ಫಲಿತಾಂಶ ದಾಖಲಾಗಿದೆ.

ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, “ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುತ್ತಾರೆ. ಹೀಗಾಗಿ ನಾವು ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸಲು ನಿರ್ಧರಿಸಿ, ಆ ಪ್ರಕಾರ ಸಿದ್ಧತೆ ನಡೆಸಿ ಫಲಿತಾಂಶ ಬಿಡುಗಡೆ ಮಾಡಿದ್ದೇವೆ. ಈ ಹಿಂದೆ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು 10 ನಿಮಿಷಗಳ ಒಳಗಾಗಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಸಹಕಾರ ನೀಡಿದ ವಿಟಿಯು ಆಡಳಿತ ಸಿಬ್ಬಂದಿ, ಪರೀಕ್ಷಾ ವಿಭಾಗದ ಸಿಬ್ಬಂದಿ ಮತ್ತು ಸಂಯೋಜಿತ ಕಾಲೇಜುಗಳ ಸಿಬ್ಬಂದಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು.

ಫಲಿತಾಂಶದ ಇತಿಹಾಸ: 2026ರಲ್ಲಿ ಅಂತಿಮ ವರ್ಷದ 56 ಸಾವಿರ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಬಿಡುಗಡೆ ಮಾಡಿತ್ತು. 2025ರಲ್ಲಿ 50,321 ವಿದ್ಯಾರ್ಥಿಗಳ ಫಲಿತಾಂಶವನ್ನು ಕೇವಲ 1 ಗಂಟೆ ಅವಧಿಯಲ್ಲಿ ಪ್ರಕಟಿಸಿತ್ತು. ಇನ್ನೂ 6ನೇ ಸೆಮಿಸ್ಟರ್ ಫಲಿತಾಂಶದ ಇತಿಹಾಸ ನೋಡಿದರೆ, 2024-25ರಲ್ಲಿ 58,232 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ 10 ದಿನಗಳಲ್ಲಿ ಪ್ರಕಟಿಸಿತ್ತು.

ಈ ಕುರಿತು ಮಾತನಾಡಿದ ವಿಟಿಯು ಕುಲಸಚಿವ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್, “ನಾವು ಡಿಜಿಟಲ್ ಮೌಲ್ಯಮಾಪನ ಮಾಡಲಿದ್ದು, ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಲು ಸಿದ್ಧತೆ ನಡೆಸಲಾಗಿತ್ತು. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.

6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟದ ಇತಿಹಾಸ

ವರ್ಷವಿದ್ಯಾರ್ಥಿಗಳ ಸಂಖ್ಯೆಫಲಿತಾಂಶದ ಅವಧಿ
2025-2660,8565 ನಿಮಿಷ
2024-2558,23210 ದಿನ
2023-2449,99711 ದಿನ
2022-2341,83510 ದಿನ

ಗಮನಾರ್ಹ ಅಂಶ: ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿದ್ದರೂ (60,856), ಕೇವಲ 5 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿರುವುದು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಸಾಕ್ಷಿಯಾಗಿದೆ ಮತ್ತು ಇದು ಒಂದು ದಾಖಲೆಯಾಗಿದೆ.

Share it :

Leave a Reply

Your email address will not be published. Required fields are marked *