CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ : ಕಾಕ್ರೋಚ್ ಜನತಾ ಪಾರ್ಟಿ

ಇಂದು ಬೆಳಗ್ಗೆ 10 ಗಂಟೆಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿರುವ ಪಕ್ಷ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದೆ.ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ಮತ್ತೆ ಆರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಘೋಷಿಸಿದೆ.

ದೆಹಲಿಯಲ್ಲಿ ಕಳೆದ ದಿನ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದ ಒಂದು ದಿನದ ಬಳಿಕ ಪಕ್ಷ ಈ ಘೋಷಣೆ ಮಾಡಿದೆ.ನೀವು ಎಷ್ಟು ಜನರನ್ನು ವಶಕ್ಕೆ ಪಡೆದರೂ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ಜಂತರ್ ಮಂತರ್‌ಗೆ ತೆರಳುತ್ತೇವೆ ಎಂದು ಅವರು ತಿಳಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ ಅವರು, ಪೊಲೀಸರು ಎಲ್ಲಿ ತಡೆದರೂ ಅಲ್ಲಿಯೇ ಪ್ರತಿಭಟನೆ ಮುಂದುವರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿಯ ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ, ದೆಹಲಿಯಲ್ಲಿ ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದು ಮತ್ತು ವಿಧಿಸಿರುವ ನಿರ್ಬಂಧಗಳ ಬಗ್ಗೆಯೂ ಟೀಕಿಸಿದರು. ದೆಹಲಿಯನ್ನು ‘ಕಂಟೋನ್ಮೆಂಟ್ ಅಥವಾ ಕೋಟೆ’ಯಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು.

13 ಕೋಟಿ ಮತಗಳನ್ನು ಅಳಿಸಲಾಗಿದೆ ಹಾಗೂ ತಿರುಚಲಾಗಿದೆ ಎಂಬ ಆರೋಪಗಳ ಕುರಿತು ಹೊಣೆಗಾರಿಕೆ ನಿಗದಿಪಡಿಸುವವರೆಗೆ ದೇಶಾದ್ಯಂತ ನಾಗರಿಕ ಅಸಹಕಾರ ಚಳವಳಿ ಮತ್ತು ಬೀದಿ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಪಕ್ಷ ಹೇಳಿದೆ.

ಪಕ್ಷದ ನಾಯಕರು ಹಾಗೂ ಇತರ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದನ್ನು ಸಿಜೆಪಿ ಪ್ರತಿನಿಧಿಗಳು ಖಂಡಿಸಿದರು. ಶಾಂತಿಯುತವಾಗಿ ಸಭೆ ಸೇರುವುದನ್ನು ತಡೆಯಲು ಅಧಿಕಾರಿಗಳು ‘ಘೋಷಣೆಯಾಗದ ತುರ್ತು ಪರಿಸ್ಥಿತಿ’ಯನ್ನು ಹೇರಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜಕೀಯ ಮುಖಂಡರು ಸೇರಿದಂತೆ 15,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಅಥವಾ ಅವರು ಪೊಲೀಸ್ ಕ್ರಮವನ್ನು ಎದುರಿಸಿದ್ದಾರೆ ಎಂದು ಪ್ರತಿಪಾದಿಸಿದರು. ಸಾರ್ವಜನಿಕ ಸಾರಿಗೆಯ ಮೇಲಿನ ನಿರ್ಬಂಧಗಳು ಹಾಗೂ ಸಿಗ್ನಲ್ ಜಾಮರ್‌ಗಳ ಬಳಕೆಯು ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ ಎಂದೂ ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವ ನಾಗರಿಕ ಸಮಾಜದ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವಕ್ತಾರ ಅನೀಶ್ ಗವಾಂಡೆ ಆರೋಪಿಸಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೂ ಪಕ್ಷ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಇಂದು ನಮ್ಮನ್ನು ವಶಕ್ಕೆ ಪಡೆದ ಬಳಿಕ ನಾವು ಮನೆಗೆ ಮರಳುತ್ತೇವೆ ಎಂದು ಸರ್ಕಾರ ಭಾವಿಸಿರಬಹುದು. ಮೋದಿ, ಶಾ ಅವರ ಈ ಭಯವೇ ನಾವು ಹೋರಾಟದ ಅರ್ಧದಷ್ಟು ಗೆದ್ದಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ಶಿಂಧೆ ಹೇಳಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post