ಸೌದಿಯಲ್ಲಿ 600 ಕನ್ನಡಿಗರು ಅತಂತ್ರ: ತುರ್ತು ನೆರವಿಗೆ 24×7 ಸಹಾಯವಾಣಿ ಆರಂಭ

ಬೆಂಗಳೂರು: ಪಶ್ಚಿಮ ಏಷ್ಯಾದ ಪ್ರಸ್ತುತ ಪ್ರಕ್ಷುಬ್ಧ ಪರಿಸ್ಥಿತಿ ಹಾಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿನ ವ್ಯತ್ಯಯಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರ ರಕ್ಷಣೆ ಮತ್ತು ಸುರಕ್ಷತೆಗೆ ರಾಜ್ಯ ಸರ್ಕಾರ ಸಂಪೂರ್ಣ ಮುತುವರ್ಜಿ ವಹಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. 

ಸೌದಿಯಲ್ಲಿ ನೆಲೆಸಿರುವವರು, ವಿಮಾನ ರದ್ದತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರು ಹಾಗೂ ರಾಜ್ಯದಿಂದ ಪ್ರಯಾಣ ಬೆಳೆಸಲು ಸಿದ್ಧರಾಗಿರುವ ಪ್ರತಿಯೊಬ್ಬ ಕನ್ನಡಿಗರ ಯೋಗಕ್ಷೇಮವನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

600 ಉಮ್ರಾ ಯಾತ್ರಿಕರು ಅತಂತ್ರ: ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ

ವಿಮಾನಗಳ ಹಾರಾಟ ರದ್ದತಿಯಿಂದಾಗಿ ಕರ್ನಾಟಕದಿಂದ ತೆರಳಿದ್ದ ಸುಮಾರು 600 ಉಮ್ರಾ ಯಾತ್ರಿಕರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಈ ಯಾತ್ರಿಕರ ಸುರಕ್ಷತೆ ಹಾಗೂ ಅವರಿಗೆ ಅಗತ್ಯ ನೆರವು ಒದಗಿಸಲು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಜೊತೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಸಿಲುಕಿರುವ ಯಾತ್ರಿಕರನ್ನು ಆದಷ್ಟು ಬೇಗ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಮಾನಯಾನ ಸಂಸ್ಥೆಗಳು ಮತ್ತು ಟೂರ್ ಆಪರೇಟರ್‌ಗಳೊಂದಿಗೆ ರಾಯಭಾರ ಕಚೇರಿಗಳು ಸಮನ್ವಯ ಸಾಧಿಸುತ್ತಿವೆ.

ರಾಜ್ಯದಿಂದ ಸಹಾಯವಾಣಿ ಕೇಂದ್ರಗಳು ಸಕ್ರಿಯ

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಿ ನೆರವು ಕಲ್ಪಿಸಲು ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) ಕಾರ್ಯಪ್ರವೃತ್ತವಾಗಿದೆ. ಸೌದಿಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ಹಜ್ ಇಲಾಖೆ ಹಾಗೂ ಎಸ್ಇಒಸಿ ವತಿಯಿಂದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ಸಹಾಯವಾಣಿಗಳನ್ನು ಆರಂಭಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಶಾಂತಿ ಕಾಪಾಡಲು ಕರೆ: ಸ್ಥಳೀಯ ಕಾನೂನು ಗೌರವಿಸಲು ಕಟ್ಟುನಿಟ್ಟಿನ ಸಲಹೆ

ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಕನ್ನಡಿಗರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗದೆ ಸಂಯಮ ಕಾಪಾಡಿಕೊಳ್ಳಬೇಕು ಹಾಗೂ ಸ್ಥಳೀಯ ಆಡಳಿತ ಮತ್ತು ಭಾರತೀಯ ರಾಯಭಾರ ಕಚೇರಿ ಹೊರಡಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪರಮೇಶ್ವರ ಮನವಿ ಮಾಡಿದ್ದಾರೆ. ಒಂದು ವೇಳೆ ವೈಮಾನಿಕ ದಾಳಿಗಳು ಸಂಭವಿಸಿದರೆ ಎಲ್ಲರೂ ಮನೆಯ ಒಳಗೇ ಇರಬೇಕು. ಯಾವುದೇ ಭದ್ರತಾ ಘಟನೆಗಳ ವಿಡಿಯೋ ಅಥವಾ ಫೋಟೋಗಳನ್ನು ಸೆರೆಹಿಡಿಯುವುದು, ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಮಾಡಬಾರದು; ಇದು ಸ್ಥಳೀಯ ಸೌದಿ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಸೌದಿಗೆ ಮತ್ತು ಮುಖ್ಯವಾಗಿ ಉಮ್ರಾ ಯಾತ್ರೆಗೆ ತೆರಳಲು ಯೋಜಿಸುತ್ತಿರುವ ಕನ್ನಡಿಗರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ವಿಮಾನಯಾನ ಸಂಸ್ಥೆಗಳು ಹಾಗೂ ಟೂರ್ ಆಪರೇಟರ್‌ಗಳಿಂದ ವಿಮಾನದ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ತುರ್ತು ಸಹಾಯವಾಣಿ ಸಂಖ್ಯೆಗಳ ವಿವರ

ಕರ್ನಾಟಕ ಹಜ್ ಇಲಾಖೆ:

9483503132, 7899707775

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC):

1070 (ಟೋಲ್ ಫ್ರೀ), 080-22253707

ಭಾರತೀಯ ರಾಯಭಾರ ಕಚೇರಿ (ರಿಯಾದ್):

ದೂರವಾಣಿ: +966 554412016, +966 542126784

ವಾಟ್ಸಾಪ್ ಸಂದೇಶಗಳಿಗೆ ಮಾತ್ರ: +966 536216082

ಭಾರತೀಯ ಕಾನ್ಸುಲೇಟ್ (ಜೆಡ್ಡಾ):

ದೂರವಾಣಿ: +966 122614093, +966 556122301

ವಾಟ್ಸಾಪ್ ಸಂದೇಶಗಳಿಗೆ ಮಾತ್ರ: +966 536209704

ಸೌದಿ ಅರೇಬಿಯಾ ವ್ಯಾಪ್ತಿಯ ಉಚಿತ ಸಹಾಯವಾಣಿ: 8002471234

ಸಂಕಷ್ಟದಲ್ಲಿರುವ ಕನ್ನಡಿಗರು ಅಥವಾ ಅವರ ಕುಟುಂಬ ಸದಸ್ಯರು ಯಾವುದೇ ತುರ್ತು ಸಹಾಯಕ್ಕಾಗಿ ಈ ಮೇಲಿನ ಸಹಾಯವಾಣಿಗಳನ್ನು ಸಂಪರ್ಕಿಸಬಹುದಾಗಿದೆ. ಪ್ರತಿಯೊಬ್ಬ ಕನ್ನಡಿಗನ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಡಾ. ಜಿ. ಪರಮೇಶ್ವರ ಭರವಸೆ ನೀಡಿದ್ದಾರೆ.

Share it :

Leave a Reply

Your email address will not be published. Required fields are marked *