ನವದೆಹಲಿ: ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಕಾಂಗ್ರೆಸ್ ಯತ್ನಿಸುತ್ತಿದೆ, ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುತ್ತಿದೆ, ಇತರ ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ,ಗಾಂಧಿ ಕುಟುಂಬವು ಕಾಂಗ್ರೆಸ್ಗೆ ಹೊರೆಯಾಗಿ ಪರಿಣಮಿಸಿದೆ ಎಂದು ಬಣ್ಣಿಸಿದ ಪ್ರಧಾನಿ, ಪಕ್ಷದ ಹಿರಿಯ ನಾಯಕರು ಖಾಸಗಿಯಾಗಿ ಈ ಅಭಿಪ್ರಾಯವನ್ನು ಒಪ್ಪಿಕೊಂಡರೂ ಬಹಿರಂಗವಾಗಿ ಮಾತನಾಡಲು ಮೌನ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾಸ್ತವವಾಗಿ, ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದೆ. ಪಕ್ಷದ ಹಿರಿಯ ನಾಯಕರಿಗೂ ಈ ಸಂಗತಿ ತಿಳಿದಿದೆ. ನಾವು ಖಾಸಗಿಯಾಗಿ ಭೇಟಿಯಾದಾಗ ಅವರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೂ, ಅವಮಾನದ ಕಹಿಯನ್ನು ನುಂಗುತ್ತಾ ಮೌನವಾಗಿರಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನ ಇಂತಹ ವರ್ತನೆಯಿಂದ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸರ್ಕಾರವನ್ನು ಟೀಕಿಸಲು ಬಯಸುವ ವಿರೋಧ ಪಕ್ಷದ ನಾಯಕರಿಗೂ ಹಾನಿಯಾಗುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಅವರು ವಿದೇಶಗಳಿಗೆ ಹೋಗಿ ಭಾರತಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ಅಲ್ಲದೆ, ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಂತೆ ವಿದೇಶಿಯರನ್ನು ಬೇಡಿಕೊಳ್ಳುತ್ತಾರೆ ಎಂದು ಟೀಕಿಸಿದರು.
ತಮ್ಮ ನಾಯಕನನ್ನು ಮತ್ತೆ ಮತ್ತೆ ಮುಂಚೂಣಿಗೆ ತರಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಗಳಿಗೆ ವ್ಯಂಗ್ಯವಾಗಿ ಟೀಕಿಸಿದ ಪ್ರಧಾನಿ ಮೋದಿ, ದೇಶವನ್ನು ಪಣಕ್ಕಿಟ್ಟು ತನ್ನ ‘ವಿಫಲ ಉತ್ಪನ್ನ’ವನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಪಕ್ಷ ಇನ್ನೆಷ್ಟು ಕಾಲ ಪ್ರಯತ್ನಿಸುತ್ತಿರುತ್ತದೆ ಎಂಬುದೇ ಅಚ್ಚರಿಯ ಸಂಗತಿ ಎಂದು ಹೇಳಿದರು. ಹೀಗೆ ಹೇಳುವಾಗ ಪ್ರಧಾನಿಯವರು ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ.
ಈ ಸಂದರ್ಭದಲ್ಲಿ ಉಪಗ್ರಹ ಉಡಾವಣೆಗಳೊಂದಿಗೆ ಹೋಲಿಕೆ ಮಾಡಿದ ಮೋದಿ, ವಾಸ್ತವವಾಗಿ, ಒಂದು ವರ್ಷದಲ್ಲಿ ನಮ್ಮ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ನಡೆಯುವ ಉಡಾವಣೆಗಳ ಸಂಖ್ಯೆಗಿಂತ, ತನ್ನ ನಾಯಕನನ್ನು ಮುಂಚೂಣಿಗೆ ತರಲು ಕಾಂಗ್ರೆಸ್ ನಡೆಸುವ ವಿಫಲ ಪ್ರಯತ್ನಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.
ಪದೇಪದೇ ಎದುರಾಗುತ್ತಿರುವ ವೈಫಲ್ಯಗಳ ಕಳಂಕದಿಂದ ತನ್ನ ಕುಟುಂಬವನ್ನು ರಕ್ಷಿಸಲು ಕಾಂಗ್ರೆಸ್ ಮಾಡುತ್ತಿರುವ ಕೆಲಸ ಭಾರತದ ಸಾಧನೆಗಳನ್ನು ಪ್ರಶ್ನಿಸುತ್ತಿರುವುದು. ಆದರೆ, ಕಾಂಗ್ರೆಸ್ ತನ್ನದೇ ಪತನಕ್ಕೆ ದಾರಿ ಮಾಡಿಕೊಳ್ಳುತ್ತಿದೆ. ಅದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ನಿರಂತರ ವೈಫಲ್ಯಗಳ ಕಳಂಕದಿಂದ ತಮ್ಮ ಕುಟುಂಬವನ್ನು ರಕ್ಷಿಸುವ ಹತಾಶ ಪ್ರಯತ್ನದಲ್ಲಿ ಕಾಂಗ್ರೆಸ್ ಈಗ ಭಾರತದ ಸಾಧನೆಗಳು, ಗುಣವೈಶಿಷ್ಟ್ಯಗಳು ಮತ್ತು ಪ್ರಗತಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿರುವಾಗ, ಕೆಲವರು ಭಾರತದಲ್ಲಿ ಅರಾಜಕತೆಯ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ವಿದೇಶಗಳಲ್ಲಿ ದೇಶದ ಗೌರವಕ್ಕೆ ಧಕ್ಕೆ ತರುವ ಮೂಲಕ ವಿರೋಧ ಪಕ್ಷದ ನಾಯಕರು ಭಾರತದ ಪ್ರತಿಷ್ಠೆಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಅರಾಜಕತೆ ತಲೆದೋರಿರುವ ಈ ಸಂದರ್ಭದಲ್ಲಿ, ಬಲಿಷ್ಠ ಭಾರತದ ಚಿತ್ರಣವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಬೇಕು. ಆದರೆ, ಈ ವ್ಯಕ್ತಿಗಳು ಭಾರತದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಲು ಪಣತೊಟ್ಟಿರುವಂತೆ ಕಾಣುತ್ತಿದೆ ಎಂದರು.





