ಆಜಾದ್ ಹಿಂದ್ ಫೌಜ್ – ಭಾರತ ಸ್ವಾತಂತ್ರ್ಯಕ್ಕಾಗಿ ಜನ್ಮತಾಳಿದ ಸೈನ್ಯ : ಮಾಹಿತಿ ಇಲ್ಲಿದೆ ನೋಡಿ

ಅಕ್ಟೋಬರ್ 21. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆಯಬೇಕಾದ ಪವಿತ್ರ ದಿನ. 1943ರ ಇದೇ ದಿನ ಸಿಂಗಾಪುರದ ಕ್ಯಾಥೆ ಸಿನಿಮಾ ಹಾಲ್‌ನಲ್ಲಿ ಒಬ್ಬ ವ್ಯಕ್ತಿ ಬ್ರಿಟಿಷ್ ಸಾಮ್ರಾಜ್ಯಕ್ಕೇ ಸವಾಲು ಹಾಕಿದ. ಆ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರು ಸ್ಥಾಪಿಸಿದ್ದು ಕೇವಲ ಒಂದು ಸೈನ್ಯವನ್ನಲ್ಲ, ಒಂದು ಸ್ವತಂತ್ರ ಸರ್ಕಾರವನ್ನು ಆಜಾದ್ ಹಿಂದ್ ತಾತ್ಕಾಲಿಕ ಸರ್ಕಾರವಾಗಿದೆ.

ನಾವು ಸ್ವಾತಂತ್ರ್ಯವನ್ನು ಅಹಿಂಸೆಯಿಂದ ಪಡೆದೆವು ಎಂದು ಪಠ್ಯಪುಸ್ತಕ ಹೇಳುತ್ತದೆ. ಅದು ಸತ್ಯದ ಒಂದು ಭಾಗ ಮಾತ್ರ. ಆ ಅಹಿಂಸೆಯ ಮಾತುಕತೆಗೆ ಬ್ರಿಟಿಷರು ಒಪ್ಪುವಂತೆ ಮಾಡಿದ್ದು, ಅವರ ಎದೆಯಲ್ಲಿ ನಡುಕ ಹುಟ್ಟಿಸಿದ್ದು ಇದೇ ಆಜಾದ್ ಹಿಂದ್ ಫೌಜ್‌ನ ಬಂದೂಕಿನ ಸದ್ದು ಎಂಬುದನ್ನು ಇತಿಹಾಸ ಮರೆಯಬಾರದು.

ಫೌಜ್ ಹುಟ್ಟಿದ್ದು ಹೇಗೆ? ಈ ಸೈನ್ಯದ ಮೂಲ ಕಲ್ಪನೆ ನೇತಾಜಿಯವರದಲ್ಲ. ಎರಡನೇ ಮಹಾಯುದ್ಧದಲ್ಲಿ ಮಲೇಷ್ಯಾ, ಸಿಂಗಾಪುರದಲ್ಲಿ ಬ್ರಿಟಿಷರ ಪರ ಹೋರಾಡಿ ಜಪಾನ್‌ಗೆ ಯುದ್ಧ ಕೈದಿಗಳಾದ 45,000 ಭಾರತೀಯ ಸೈನಿಕರನ್ನು ಒಗ್ಗೂಡಿಸಿ 1942ರಲ್ಲಿ ಜನರಲ್ ಮೋಹನ್ ಸಿಂಗ್ ಮತ್ತು ರಾಸ್ ಬಿಹಾರಿ ಬೋಸ್ ಅವರು ‘ಇಂಡಿಯನ್ ನ್ಯಾಷನಲ್ ಆರ್ಮಿ’ ಕಟ್ಟಿದರು.

ಆದರೆ ಆ ಸೈನ್ಯಕ್ಕೆ ನಿಜವಾದ ನಾಯಕ ಬೇಕಿತ್ತು. ಆ ಕೊರತೆಯನ್ನು ನೀಗಲು ಜರ್ಮನಿಯಿಂದ ಜಲಾಂತರ್ಗಾಮಿಯಲ್ಲಿ 90 ದಿನಗಳ ಅಪಾಯಕಾರಿ ಪಯಣ ಮಾಡಿ ಬಂದಿಳಿದಿದ್ದು ನೇತಾಜಿ. ಜುಲೈ 4, 1943ರಂದು ರಾಸ್ ಬಿಹಾರಿ ಬೋಸ್ ಅಧಿಕಾರವನ್ನು ಅವರಿಗೆ ಹಸ್ತಾಂತರಿಸಿದರು. ನಂತರ ಬಂದದ್ದೇ ಆ ಐತಿಹಾಸಿಕ ಅಕ್ಟೋಬರ್ 21 ಆಗಿದ್ದು,ಇದು ಸಾಮಾನ್ಯ ಸರ್ಕಾರವಾಗಿರಲಿಲ್ಲ. ಇದಕ್ಕೆ ತನ್ನದೇ ಕರೆನ್ಸಿ, ಅಂಚೆ ಚೀಟಿ, ನ್ಯಾಯಾಲಯ, ಬ್ಯಾಂಕ್ ಇತ್ತು. 9 ದೇಶಗಳ ಮಾನ್ಯತೆಯಿತ್ತು. ಪ್ರಧಾನಿ, ರಕ್ಷಣಾ ಮತ್ತು ವಿದೇಶಾಂಗ ಮಂತ್ರಿ ಎಲ್ಲವೂ ನೇತಾಜಿಯೇ.

‘ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಜಾದಿ ದೂಂಗಾ’ಈ ಒಂದು ಘರ್ಜನೆಗೆ ಸಾವಿರಾರು ಅನಿವಾಸಿ ಭಾರತೀಯರು, ಮಲೇಷ್ಯಾದ ತಮಿಳು ತೋಟದ ಕಾರ್ಮಿಕರು ತಮ್ಮ ಚಿನ್ನ, ಆಸ್ತಿ, ಮಕ್ಕಳನ್ನು ದೇಶಕ್ಕೆ ಅರ್ಪಿಸಿದರು. ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ನೇತೃತ್ವದಲ್ಲಿ ಝಾನ್ಸಿ ರಾಣಿ ರೆಜಿಮೆಂಟ್ ಎಂಬ ಮಹಿಳಾ ದಳವನ್ನು ಕಟ್ಟಿದ್ದು ಭಾರತೀಯ ಸೇನಾ ಇತಿಹಾಸದಲ್ಲೇ ಕ್ರಾಂತಿಕಾರಿ ಹೆಜ್ಜೆಯಾಗಿದೆ

ಈ ಸೈನ್ಯದ ಗುರಿ ಒಂದೇ ಚಲೋ ದೆಹಲಿ. 1944ರಲ್ಲಿ ಬರ್ಮಾ ಗಡಿ ದಾಟಿ ಇಂಫಾಲ್, ಕೊಹಿಮಾ ಕದನಗಳಲ್ಲಿ ಹೋರಾಡಿ ಮಣಿಪುರದ ಮೊಯಿರಾಂಗ್‌ನಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಇದೇ ಫೌಜ್. ಅಂದಿನ ಆ ಧ್ವಜವೇ ಇಂದು ಕೆಂಪುಕೋಟೆಯ ಮೇಲೆ ಹಾರುತ್ತಿರುವ ಧ್ವಜವಾಗಿದೆ.

ಮೈಸೂರು ಹುಲಿಯಿಂದ ಆಜಾದ್ ಹಿಂದ್ ಹುಲಿಯವರೆಗೆ ಟಿಪ್ಪು ಸುಲ್ತಾನ್ ಹುಲಿ ಚಿಹ್ನೆಯ ಸಾಂದರ್ಭಿಕತೆ.ಇಲ್ಲಿ ಒಂದು ಮಹತ್ವದ ಐತಿಹಾಸಿಕ ಕೊಂಡಿ ಇದೆ. ನೇತಾಜಿ ತಮ್ಮ ಸೈನ್ಯಕ್ಕೆ ಆಯ್ಕೆ ಮಾಡಿಕೊಂಡ ಚಿಹ್ನೆ ಯಾವುದು? ಹಾರುತ್ತಿರುವ ಹುಲಿ.ಆಜಾದ್ ಹಿಂದ್ ಫೌಜ್‌ನ ಟೋಪಿಯ ಬ್ಯಾಡ್ಜ್‌ನಲ್ಲಿ, ಭುಜದ ಪಟ್ಟಿಯಲ್ಲಿ, ಅಧಿಕೃತ ಧ್ವಜದಲ್ಲಿ ಇರುವುದು ಹುಲಿ. ಇದು ಆಕಸ್ಮಿಕವಲ್ಲ.

150 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಕೊನೆಯ ಉಸಿರಿನವರೆಗೂ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮೊದಲ ಬಾರಿಗೆ ಹುಲಿಯನ್ನು ಬ್ರಿಟಿಷ್ ವಿರೋಧಿ ಪ್ರತಿರೋಧದ ಸಂಕೇತವನ್ನಾಗಿ ಮಾಡಿದ್ದರು. ಅವರ ಧ್ವಜ ಹಳದಿ ಬಟ್ಟೆಯ ಮೇಲೆ ಕಪ್ಪು ಪಟ್ಟೆಯ ಹುಲಿ, ಅವರ ಖಡ್ಗ, ಅವರ ಸಿಂಹಾಸನದ ಹುಲಿ. ‘ಹುಲಿಯಂತೆ ಒಂದು ದಿನ ಬದುಕುವುದು ನರಿ ನಂತೆ ನೂರು ದಿನ ಬದುಕುವುದಕ್ಕಿಂತ ಲೇಸು’ ಎಂಬುದು ಟಿಪ್ಪುವಿನ ಘೋಷಣೆಯಾಗಿತ್ತು.

ನೇತಾಜಿ ಅದೇ ಸಂಕೇತವನ್ನು ಮತ್ತೆ ಜೀವಂತಗೊಳಿಸಿದರು. ಟಿಪ್ಪುವಿನ ಹುಲಿ ಮೈಸೂರಿನ ಅರಮನೆಯಲ್ಲಿ ಸೀಮಿತವಾಗಿತ್ತು, ನೇತಾಜಿಯ ಹುಲಿ ಬರ್ಮಾದ ಕಾಡಿನಿಂದ ದೆಹಲಿಯತ್ತ ನುಗ್ಗಿತು. ಟಿಪ್ಪು ಬ್ರಿಟಿಷರಿಗೆ ಹೇಳಿದ್ದರು – ನಾನು ಗುಲಾಮನಲ್ಲ, ಹುಲಿ ಎಂದು. ನೇತಾಜಿ ಬ್ರಿಟಿಷರಿಗೆ ಹೇಳಿದರು ನಾವು ನಿಮ್ಮ ಗುಲಾಮ ಸೈನಿಕರಲ್ಲ, ನಾವು ಆಜಾದ್ ಹಿಂದ್ ಫೌಜ್ ಎಂದು.

ಹೀಗಾಗಿ ಆಜಾದ್ ಹಿಂದ್ ಫೌಜ್‌ನ ಹುಲಿ ಚಿಹ್ನೆ ಕೇವಲ ಒಂದು ಲಾಂಛನವಲ್ಲ, ಅದು ಶ್ರೀರಂಗಪಟ್ಟಣದಿಂದ ಸಿಂಗಾಪುರದವರೆಗಿನ ಸ್ವಾತಂತ್ರ್ಯದ ಹೋರಾಟದ ನಿರಂತರತೆಯ ಸಂಕೇತವಾಗಿದೆ.

ಸೋಲಿನಲ್ಲೇ ಗೆಲುವು ದುರದೃಷ್ಟವಶಾತ್ ಜಪಾನ್ ಸೋಲು, ಮಳೆ, ರೋಗಗಳಿಂದ ಫೌಜ್ ಹಿನ್ನಡೆ ಅನುಭವಿಸಿತು. ಆದರೆ ಆ ಸೋಲೇ ಭಾರತದ ಗೆಲುವಾಯಿತು. ಯುದ್ಧದ ನಂತರ ಕೆಂಪುಕೋಟೆಯಲ್ಲಿ ಕರ್ನಲ್ ಪ್ರೇಮ್ ಸೆಹಗಲ್, ಕರ್ನಲ್ ಧಿಲ್ಲೋನ್, ಮೇಜರ್ ಶಾ ನವಾಜ್ ಖಾನ್ ಮೇಲೆ ನಡೆದ ದೇಶದ್ರೋಹ ವಿಚಾರಣೆಯ ವಿರುದ್ಧ ಇಡೀ ದೇಶವೇ ‘ಜೈ ಹಿಂದ್’ ಎಂದು ಒಂದಾಯಿತು. ಹಿಂದೂ-ಮುಸ್ಲಿಂ-ಸಿಖ್ ಎನ್ನದೆ ಒಂದಾದ ಭಾರತವನ್ನು ನೋಡಿ ಬ್ರಿಟಿಷರಿಗೆ ಅರ್ಥವಾಯಿತು.ಇನ್ನು ಭಾರತೀಯ ಸೈನಿಕರನ್ನು ನಂಬಿ ಆಳಲು ಸಾಧ್ಯವಿಲ್ಲ ಎಂದು. ಆ ವಿಚಾರಣೆಯೇ ಸ್ವಾತಂತ್ರ್ಯದ ಬಾಗಿಲು ತೆರೆಯಿತು.

ಇಂದು ನಾವು ಉಸಿರಾಡುವ ಸ್ವಾತಂತ್ರ್ಯದ ಗಾಳಿಯಲ್ಲಿ ಆ 26,000 ಹುತಾತ್ಮ ಆಜಾದ್ ಹಿಂದ್ ಸೈನಿಕರ ಉಸಿರಿದೆ. ಅವರ ಜೊತೆಗೆ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ಎದುರು ಮಲಗಿದ ಆ ಹುಲಿಯ ಉಸಿರೂ ಇದೆ.

ಅಕ್ಟೋಬರ್ 21 ಕೇವಲ ದಿನವಲ್ಲ, ಅದು ಪ್ರತಿ ಯುವಕನಲ್ಲಿ ‘ದೇಶಕ್ಕಾಗಿ ಏನಾದರೂ ಮಾಡಬೇಕು’ ಎಂಬ ಕಿಚ್ಚು ಹಚ್ಚುವ ಸ್ಫೂರ್ತಿ ದಿನ. ಶ್ರೀರಂಗ ಪಟ್ಟಣದ ಸಮರ್ಪಣ ಟ್ರಸ್ಟ್ ವತಿಯಿಂದ ಆ ತ್ಯಾಗಕ್ಕೆ ಕೋಟಿ ನಮನಗಳು. ಜೈ ಹಿಂದ್ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others