ವಿಧಾನಸೌಧಕ್ಕಷ್ಟೇ ಸೀಮಿತವಲ್ಲ ಸಚಿವರ ಸೇವೆ: ರಾಮಲಿಂಗಾರೆಡ್ಡಿ ನಿರಂತರ ಪ್ರವಾಸದ ಜನಸ್ನೇಹಿ ರಿಪೋರ್ಟ್ ಕಾರ್ಡ್ ಇಲ್ಲಿದೆ!

ಬೆಂಗಳೂರು: ರಾಜಕಾರಣ ಎಂದರೆ ಕೇವಲ ಹವಾನಿಯಂತ್ರಿತ ಕೊಠಡಿಯ ಭಾಷಣ ಅಥವಾ ಸಚಿವಾಲಯದ ಕಡತಗಳ ವಿಲೇವಾರಿಗೆ ಮಾತ್ರ ಸೀಮಿತವಲ್ಲ, ಅದು ಜನರ ಮಧ್ಯೆ ಇರುವುದು ಎಂಬುದನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅವರು ಕೈಗೊಂಡಿರುವ ಸಾಲು ಸಾಲು ಅಧಿಕೃತ ಪ್ರವಾಸಗಳು ಮತ್ತು ಅವರ ಕರ್ತವ್ಯ ನಿಷ್ಠೆಯ ಅಂಕಿ-ಅಂಶಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿವೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಗತಿಗೆ ವೇಗ: 54 ಅಧಿಕೃತ ವಿಸಿಟ್

ತಮ್ಮ ಹೆಗಲಿಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿಯನ್ನು ರಾಮಲಿಂಗಾರೆಡ್ಡಿ ಅವರು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಬಂದಿದ್ದಾರೆ. ದಿನಾಂಕ 20.05.2023 ರಿಂದ 22.05.2026 ರವರೆಗಿನ ಅವಧಿಯಲ್ಲಿ ಅವರು ಬರೋಬ್ಬರಿ 54 ಬಾರಿ ಜಿಲ್ಲೆಗೆ ಅಧಿಕೃತ ಭೇಟಿ ನೀಡಿದ್ದಾರೆ. ಈ ಭೇಟಿಗಳ ವೇಳೆ ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಖುದ್ದು ಸ್ಥಳ ಪರಿಶೀಲನೆ, ಪ್ರಗತಿ ಪರಿಶೀಲನಾ ಸಭೆಗಳು ಹಾಗೂ ಸಾರ್ವಜನಿಕರ ಅಹವಾಲು ಆಲಿಸುವ ಕೆಲಸವನ್ನು ನಿರಂತರವಾಗಿ ಮಾಡುವ ಮೂಲಕ ಜಿಲ್ಲೆಯ ಪ್ರಗತಿಗೆ ಚುರುಕು ಮುಟ್ಟಿಸಿದ್ದಾರೆ.

ಕರ್ನಾಟಕದಾದ್ಯಂತ 141 ಬಾರಿ ಸಂಚಾರ: ಹಿರಿಯ ಸಚಿವರ ಅಪರೂಪದ ದಾಖಲೆ

ಕೇವಲ ರಾಜಧಾನಿ ಅಥವಾ ಉಸ್ತುವಾರಿ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯದ ಮೂಲೆ ಮೂಲೆಗೂ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಕೆಲಸಗಳ ನಿಮಿತ್ತ ಸಚಿವರು ಧಾವಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಿಂದ ಹೊರಟು ರಾಜ್ಯದ ಇತರೆ ಜಿಲ್ಲೆಗಳಿಗೆ ಒಟ್ಟು 141 ಬಾರಿ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಪ್ರಸ್ತುತ ಸಚಿವ ಸಂಪುಟದಲ್ಲಿ ಇಷ್ಟೊಂದು ದೀರ್ಘಾವಧಿ ಮತ್ತು ಅತಿ ಹೆಚ್ಚು ಬಾರಿ ಹಳ್ಳಿ-ಹಳ್ಳಿಗಳಿಗೆ ಪ್ರವಾಸ ಮಾಡಿದ ಹಿರಿಯ ಸಚಿವರ ಸಾಲಿನಲ್ಲಿ ರಾಮಲಿಂಗಾರೆಡ್ಡಿ ಅವರು ಮೊದಲ ಸ್ಥಾನದಲ್ಲಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ಮಂತ್ರಿ ಆದ್ರೂ ಮಿಸ್ ಆಗಲ್ಲ ಟೈಮಿಂಗ್ಸ್: ದಿನವೂ ಬೆಳಗ್ಗೆ 8:30ಕ್ಕೆ ಕಚೇರಿಯಲ್ಲಿ ಲಭ್ಯ!

ಅಧಿಕಾರ ಸಿಕ್ಕ ಮೇಲೆ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ಸಿಗುವುದೇ ಅಪರೂಪ ಎನ್ನುವ ಇಂದಿನ ದಿನಗಳಲ್ಲಿ, ರಾಮಲಿಂಗಾರೆಡ್ಡಿ ಅವರ ನಡೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರಿನಲ್ಲಿದ್ದಾಗ ಸಚಿವರು ಪ್ರತಿದಿನ ಬೆಳಗ್ಗೆ ಸರಿಯಾಗಿ 8:30 ಗಂಟೆಗೆ ಕೋರಮಂಗಲದಲ್ಲಿ ಇರುವಂತ ತಮ್ಮ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತಾರೆ. ಯಾವುದೇ ಮುಂಚಿತ ಅಪಾಯಿಂಟ್‌ಮೆಂಟ್ ಇಲ್ಲದೆ ತೀರಾ ಸಾಮಾನ್ಯ ವ್ಯಕ್ತಿಯೂ ಸಹ ಸಚಿವರನ್ನು ನೇರವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾದ ಇಂತಹ ಜನಸ್ನೇಹಿ ವಾತಾವರಣ ಇಂದಿನ ದಿನಗಳಲ್ಲಿ ತೀರಾ ವಿರಳ.

ತಮ್ಮ ಉಸ್ತುವಾರಿ ಜಿಲ್ಲೆಯ ಜವಾಬ್ದಾರಿಯ ಜೊತೆಗೆ ಇಡೀ ರಾಜ್ಯದ ಇಲಾಖಾ ಕೆಲಸಗಳಿಗಾಗಿ ನಿರಂತರವಾಗಿ ಓಡಾಡುತ್ತಿರುವ ರಾಮಲಿಂಗಾರೆಡ್ಡಿ ಅವರ ಇಚ್ಛಾಶಕ್ತಿ ಹಾಗೂ ಕರ್ತವ್ಯ ಪ್ರಜ್ಞೆ ಇಂದಿನ ಯುವ ರಾಜಕಾರಣಿಗಳಿಗೆ ಒಂದು ಅತ್ಯುತ್ತಮ ಪಾಠ. ಇವರ ಈ ದಕ್ಷ ಕಾರ್ಯವೈಖರಿಯೇ ಇವರನ್ನು ನಿಜವಾದ “ಜನರ ನಾಯಕ”ನನ್ನಾಗಿ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others