BKH
ಬೆಂಗಳೂರು: ನಮ್ಮ ಸಮಾವೇಶದಿಂದಾಗಿ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾಗಿದ್ದರೆ ನಾನು ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸರಣಿ ತಪ್ಪು ಮಾಹಿತಿ ನೀಡುವ ಸುಳ್ಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದು, ತಮ್ಮದೇ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಬೆಂಗಳೂರಿನಲ್ಲಿ ನಡೆದ ಸಂಕಲ್ಪ ಸಮಾವೇಶದ ವೇಳೆ ನಗರದಲ್ಲಿ ಅತೀ ಹೆಚ್ಚು ಟ್ರಾಫಿಕ್ ಜಾಮ್ ಆಗಿದ್ದು ನಿಜ, ಇದರಿಂದ ಸಾರ್ವಜನಿಕರಿಗೆ ಸಣ್ಣಪುಟ್ಟ ತೊಂದರೆಗಳಾಗಿವೆ. ನಮ್ಮ ಕಾರ್ಯಕ್ರಮದಿಂದಾಗಿ ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾಗಿದ್ದರೆ ನಾನು ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಈ ವಿಚಾರದಲ್ಲಿ ಶುದ್ಧ ಸುಳ್ಳು ಮತ್ತು ತಪ್ಪು ಸಂದೇಶ ಹರಡುತ್ತಿದ್ದಾರೆ ಎಂದಿದ್ದಾರೆ.
ನೀಟ್ ಪರೀಕ್ಷೆ ಆರಂಭವಾಗಿದ್ದು ಮಧ್ಯಾಹ್ನ 2 ಗಂಟೆಗೆ. ಆದರೆ ನಮ್ಮ ಸಮಾವೇಶಕ್ಕೆ ಬಂದಿದ್ದ ಎಲ್ಲ ಬಸ್ಗಳು ಬೆಳಿಗ್ಗೆ 10 ಗಂಟೆಯ ಒಳಗೇ ಅರಮನೆ ಮೈದಾನದ ಆವರಣ ಪ್ರವೇಶಿಸಿದ್ದವು. ಹೀಗಿದ್ದರೂ ಕಾಂಗ್ರೆಸ್ನಿಂದಲೇ ಪರೀಕ್ಷೆ ಮಿಸ್ ಆಗಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣದ ಸಮಾವೇಶದಿಂದಾಗಿ ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಹಾಗೂ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹರಿಪ್ರಸಾದ್ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ಅತಿ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಗಾರಿದರು.





