ಫುಟ್‌ಪಾತ್‌ಗಳ ಅತಿಕ್ರಮಣದಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಪ್ರಾಣಾಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೃಷ್ಣಬೈರೇಗೌಡ

ಬೆಂಗಳೂರು: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣದಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಪ್ರಾಣಾಪಾಯದ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳು ಅತಿಕ್ರಮಣಗೊಂಡಿರುವುದರಿಂದ ಜನರು ನಡೆಯಲು ಜಾಗವಿಲ್ಲದೆ ಮುಖ್ಯ ರಸ್ತೆಗೆ ಇಳಿಯಬೇಕಾದ ಅನಿವಾರ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪಾದಚಾರಿಮಾರ್ಗಗಳಲ್ಲಿ ಮುಕ್ತವಾಗಿ ಓಡಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಅದರನ್ವಯ ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದರಿಂದಾಗಿ ನಗರದಲ್ಲಿ ವರ್ಷಕ್ಕೆ ಸರಾಸರಿ 300 ಜನ ಪಾದಚಾರಿಗಳು ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಾವು-ನೋವುಗಳನ್ನು ತಪ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ದೇಶದ ಎಲ್ಲಾ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ಜಾರಿಗೆ ತರಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ನಗರದ ನಾಗರಿಕರಿಂದಲೇ ಫುಟ್‌ಪಾತ್‌ಗಳನ್ನು ಮುಕ್ತಗೊಳಿಸುವಂತೆ ವ್ಯಾಪಕ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಫುಟ್‌ಪಾತ್‌ಗಳನ್ನು ಅನೇಕರು ಕಾರ್ ಮತ್ತು ಬೈಕ್ ಪಾರ್ಕಿಂಗ್ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕ ಆಸ್ತಿಯಾಗಿದ್ದು, ಪಾರ್ಕಿಂಗ್ ಮಾಡುವವರೂ ಸಹ ಕಾನೂನಿಗೆ ಗೌರವ ಕೊಟ್ಟು ಸಹಕರಿಸಬೇಕು ಎಂದರು.

ವ್ಯಾಪಾರಿಗಳು ತಮ್ಮ ಸ್ವಂತ ಜಾಗದಲ್ಲಿ ವ್ಯಾಪಾರ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ಮಾಡುವುದು ಕಾನೂನುಬಾಹಿರ. ಅಂಗಡಿಯವರು ಒತ್ತುವರಿ ಮಾಡಿದ್ದರೆ ತಕ್ಷಣವೇ ಸ್ವಯಂಪ್ರೇರಿತರಾಗಿ ತೆರವುಗೊಳಿಸಬೇಕು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post