ಮುಂದಿನ 4 ದಿನ ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿಗೆ ಬಿತ್ತು ರೆಡ್ ಅಲರ್ಟ್​

Heavy rains 

ಬೆಂಗಳೂರು: ರಾಜ್ಯದಲ್ಲಿ ಮಳೆಯಾಬ್ಬರ ಜೋರಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.ಮುಂಗಾರು ಮಾರುತಗಳು ಜೋರಾಗಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಹವಾಮಾನದ ತೀವ್ರತೆಯನ್ನು ಆಧರಿಸಿ ಭಾರತೀಯ ಹವಾಮಾನ ಇಲಾಖೆ ಜಿಲ್ಲಾವಾರು ಯೆಲ್ಲೋ ಮತ್ತು ರೆಡ್ ಅಲರ್ಟ್​ಗಳನ್ನು ಘೋಷಿಸಿದ್ದು, ಪ್ರವಾಹ ಮತ್ತು ಭೂಕುಸಿತದ ಭೀತಿ ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಈ ಅಲರ್ಟ್‌ಗಳನ್ನು ನೀಡಲಾಗಿದೆ.

ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಸುರಕ್ಷಿತ ಸ್ಥಳಗಳಲ್ಲಿರಬೇಕು.ನದಿಗಳ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಉಂಟಾಗುವ, ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಹೆಚ್ಚಿನ ಅಪಾಯವಿರುತ್ತದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆ ಜುಲೈ 5 ರಿಂದ 7 ರ ಅವಧಿಯಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ದಿನವೊಂದಕ್ಕೆ 204.5 mm ಗಿಂತಲೂ ಅಧಿಕ ಪ್ರಮಾಣದ ಅತ್ಯಂತ ತೀವ್ರವಾದ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಜುಲೈ 3 ಮತ್ತು 4 ರಂದು ಕಿತ್ತಳೆ ಎಚ್ಚರಿಕೆ ಆರೆಂಜ್ ಅಲರ್ಟ್​ ಇರಲಿದ್ದು, ಬೆಂಗಳೂರು ಸೇರಿದಂತೆ ಒಳನಾಡಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಮುಂದುವರಿಯಲಿದೆ.

ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ ಮೊದಲ ವಾರದಲ್ಲಿ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಈ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ (64.5 mm ನಿಂದ 115.4 mm ವರೆಗೆ) ಸಾಧ್ಯತೆಯಿದೆ. ಸಿಡಿಲು ಮತ್ತು ಗಂಟೆಗೆ 30-40 ಕಿ.ಮೀ ವೇಗದ ಬಲವಾದ ಗಾಳಿ ಬೀಸಬಹುದು.

ಸದ್ಯಕ್ಕೆ ತಕ್ಷಣದ ಅಪಾಯವಿಲ್ಲದಿದ್ದರೂ, ಹವಾಮಾನದ ಬದಲಾವಣೆಗಳ ಮೇಲೆ ಕಣ್ಣಿಡಬೇಕು. ಪ್ರಯಾಣದ ಯೋಜನೆಗಳಿದ್ದರೆ ರಸ್ತೆಗಳಲ್ಲಿ ನೀರು ನಿಲ್ಲುವ ಅಥವಾ ಮರಗಳು ಬೀಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others