ಬೆಂಗಳೂರು: ವಾಲ್ಮೀಕಿ ನಿಗಮದ ಬಳಿಕ ಇದೀಗ ರಾಜ್ಯದ ಮತ್ತೊಂದು ನಿಗಮದ ವಿರುದ್ಧ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿಗರು ಸಿಡಿದ್ದೆದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಒಂದಲ್ಲಾ ಒಂದು ಹಗರಣಗಳು ಬೆಳಕಿಗೆ ಬರುತ್ತಿದೆ ಇದರ ಬಗ್ಗೆ ತನಿಖೆ ಮಾಡಿ ಎಂದು ಆರ್ ಅಶೋಕ್ ಹೇಳಿದ್ದಾರೆ.
ದೇವರಾಜ ಅರಸು ನಿಗಮದಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. 10,000 ರೂ. ಮೌಲ್ಯದ ಹೊಲಿಗೆ ಮಿಷಿನ್‌ಗೆ 17,000 ರೂ. ನಿಗದಿ ಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಸುಮಾರು 5-6 ಕೋಟಿ ರೂ. ಹಗರಣ ಆಗಿದೆ ಎಂದು ಪರಮೇಶ್ ಎಂಬುವವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ,ವಿಪಕ್ಷ ನಾಯಕ ಆರ್. ಅಶೋಕ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಬಳಿಕ ಇದೀಗ ದೇವರಾಜ ಅರಸು ನಿಗಮದಲ್ಲೂ ಕೇಳಿಬರುತ್ತಿರುವ ಅಕ್ರಮದ ಆರೋಪಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳಲ್ಲೇ ಗೋಲ್ ಮಾಲ್ ನಡೆದಿರುವ ಆರೋಪಗಳಿಗೆ ರಾಜ್ಯ ಸರ್ಕಾರ ಉತ್ತರಿಸಲೇಬೇಕು. ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಬಡ ಮಹಿಳೆಯರಿಗೆ ತಲುಪಬೇಕಿದ್ದ ಹೊಲಿಗೆ ಯಂತ್ರ ಖರೀದಿಯ ಮೇಲೆಯೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಅತ್ಯಂತ ಖಂಡನೀಯ. ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹೊಲಿಗೆ ಯಂತ್ರ ಖರೀದಿ ಟೆಂಡರ್‌ನಲ್ಲಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಕೇಳಿಬಂದಿದೆ. ರಾಜ್ಯದ ವ್ಯಕ್ತಿಯೊಬ್ಬರಿಗೆ ನೀಡಿದ ಟೆಂಡರ್‌ನಲ್ಲಿ ಅಕ್ರಮ ಆಗಿದೆ ಎನ್ನಲಾಗ್ತಿದೆ ಈ ವಿಚಾರವಾಗಿ ಈ ಕೂಡಲೆ ತನಿಖೆ ಮಾಡಿ ಎಂದು ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.





