ಬೆಂಗಳೂರು: ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಪ್ರಕರಣದ ಎರಡನೇ ಆರೋಪಿ ಶಿವಕುಮಾರ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ತಿರಸ್ಕರಿಸಿದೆ. ಇದರಿಂದಾಗಿ ಎಂಎಲ್‌ಸಿ ಸೂರಜ್ ರೇವಣ್ಣ ಅವರಿಗೆ ನ್ಯಾಯಾಲಯದಲ್ಲಿ ಮಹತ್ವದ ಕಾನೂನು ಜಯ ಸಿಕ್ಕಂತಾಗಿದೆ.
ಪ್ರತಿವಾದ ಮನ್ನಿಸಿದ ನ್ಯಾಯಾಲಯ
ಶಿವಕುಮಾರ್ ಪರ ಮಾಫಿ ಸಾಕ್ಷಿ ಕೋರಿಕೆಯನ್ನು ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ನ್ಯಾಯಾಲಯದಲ್ಲಿ ತೀವ್ರವಾಗಿ ವಿರೋಧಿಸಿದ್ದರು. ಶಿವಕುಮಾರ್ ವಿರುದ್ಧ ಸಂತ್ರಸ್ತನಿಗೆ ಬೆದರಿಕೆ ಹಾಕಿದ ಆರೋಪ ಮಾತ್ರವಿದ್ದು, ಆತ ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ನಡೆದಿದೆ ಎನ್ನಲಾದ ಕೃತ್ಯಕ್ಕೆ ಪ್ರತ್ಯಕ್ಷದರ್ಶಿಯಲ್ಲ. ಆದ್ದರಿಂದ ಆತನಿಗೆ ಮಾಫಿ ಸಾಕ್ಷಿಯಾಗುವ ಕಾನೂನು ಅರ್ಹತೆಯಿಲ್ಲ ಎಂದು ಪ್ರಬಲವಾಗಿ ವಾದಿಸಿದ್ದರು. ಈ ಅಂಶಗಳನ್ನು ಪುರಸ್ಕರಿಸಿದ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ
2024ರ ಜೂನ್ 22ರಂದು ಸೂರಜ್ ರೇವಣ್ಣ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಯುವಕನೊಬ್ಬ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಇದೇ ಸಂದರ್ಭದಲ್ಲಿ ಸೂರಜ್ ಆಪ್ತ ಶಿವಕುಮಾರ್, ದೂರುದಾರ ಯುವಕನು ಸುಳ್ಳು ಆರೋಪ ಹೊರಿಸಿ 5 ಕೋಟಿ ರೂ. ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಪ್ರತಿದೂರು ಸಲ್ಲಿಸಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಸ್ವತಃ ಶಿವಕುಮಾರ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಆ ಮನವಿಯನ್ನು ನ್ಯಾಯಾಲಯ ಅಸಿಂಧುಗೊಳಿಸಿದೆ.





