ವಂಚನೆ ಆರೋಪದಡಿ ಸ್ಯಾಂಡಲ್ ವುಡ್ ನಿರ್ದೇಶಕ ಓಂ ಪ್ರಕಾಶ್ ರಾವ್ ದಂಪತಿ ವಿರುದ್ಧ ದೂರು ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಹಾಗೂ ಬೆದರಿಕೆಯ ಗಂಭೀರ ಆರೋಪ ಕೇಳಿಬಂದಿದೆ. ಚಿತ್ರ ನಿರ್ಮಾಣದ ನೆಪದಲ್ಲಿ ಬರೋಬ್ಬರಿ ₹3.85 ಕೋಟಿ ಸಾಲ ಪಡೆದು ಮರುಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ನಟ ಭಾಸ್ಕರ್ ಶೆಟ್ಟಿ, ವಾಸುದೇವ ರೆಡ್ಡಿ ಹಾಗೂ ಇತರರು ಪೊಲೀಸ್ ಆಯುಕ್ತರ ಮೆಟ್ಟಿಲೇರಿದ್ದಾರೆ.

ಏನಿದು ವಂಚನೆ ಪ್ರಕರಣ? ‘ಫೀನಿಕ್ಸ್’ ಎಂಬ ಶೀರ್ಷಿಕೆಯ ಚಲನಚಿತ್ರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಅವರ ಪತ್ನಿ, 2023ರಲ್ಲಿ ಭಾಸ್ಕರ್ ಶೆಟ್ಟಿ ಮತ್ತು ವಾಸುದೇವ ರೆಡ್ಡಿ ಅವರಿಂದ ಹಂತ-ಹಂತವಾಗಿ ಒಟ್ಟು ₹3.85 ಕೋಟಿ ಸಾಲ ಪಡೆದಿದ್ದರು. ಕೇವಲ 6 ತಿಂಗಳಲ್ಲಿ ಹಣವನ್ನು ಮರಳಿಸುವುದಾಗಿ ಭರವಸೆ ನೀಡಿದ್ದ ದಂಪತಿ, ವರ್ಷಗಳು ಕಳೆದರೂ ಅಸಲು ಹಾಗೂ ಬಡ್ಡಿಯನ್ನು ಮರುಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಮನೆಗೆ ಹೋದರೆ ಜೀವ ಬೆದರಿಕೆ! ಬಾಕಿ ಹಣವನ್ನು ಕೇಳಲು ಮನೆಗೆ ಹೋದ ಸಂದರ್ಭದಲ್ಲಿ ಓಂ ಪ್ರಕಾಶ್ ರಾವ್ ದಂಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ದೂರು ಸಲ್ಲಿಸಿ ಸಂಧಾನಕ್ಕೆ ಯತ್ನಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.

ಕಾನೂನು ಹೋರಾಟಕ್ಕೆ ನಿರ್ಧಾರ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಹಣದ ವಹಿವಾಟಿಗೆ ಸಂಬಂಧಿಸಿದ ಒಪ್ಪಂದದ ಪತ್ರಗಳು ಮತ್ತು ಬೌನ್ಸ್ ಆಗಿರುವ ಚೆಕ್‌ಗಳನ್ನು ಸಾಕ್ಷಿಯಾಗಿಟ್ಟುಕೊಂಡು ವಂಚನೆ (ಚೀಟಿಂಗ್) ಹಾಗೂ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲು ಸಂತ್ರಸ್ತರು ಮುಂದಾಗಿದ್ದಾರೆ. ಬ್ಯಾಡರಹಳ್ಳಿ ಠಾಣೆ ಪೊಲೀಸರ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others