ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಜನವಿರೋಧಿ ಅಧಿಸೂಚನೆಯನ್ನು ನಮ್ಮ ಸರ್ಕಾರವು ಬಲವಾಗಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ನೀಡಬಾರದು ಎಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎನ್ನುವುದನ್ನು ಈ ಮೂಲಕ ರಾಜ್ಯದ ಜನರ ಗಮನಕ್ಕೆ ತರಲು ಬಯಸುತ್ತೇನೆ ಎಂಬುದಾಗಿ ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದ 10 ಜಿಲ್ಲೆಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಈ ಅಧಿಸೂಚನೆಯು ರಾಜ್ಯದ ಲಕ್ಷಾಂತರ ಕುಟುಂಬಗಳನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. ಹೀಗಾಗಿ ನಾವು ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರದ ನಿರ್ಣಯದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲು ಸಹ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಶತಮಾನಗಳಿಂದ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಲ್ಲಿನ ಪ್ರಕೃತಿಯೊಂದಿಗೆ ಸಮತೋಲಿತ ಜೀವನ ಶೈಲಿಯನ್ನು ಅಳವಡಿಸಿಕೊಂಡು, ತಮ್ಮ ಸುತ್ತಲಿನ ಪರಿಸರವನ್ನು ಗೌರವಿಸುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಮನುಷ್ಯ ಮತ್ತು ಪರಿಸರದ ನಡುವಿನ ಈ ಅನ್ಯೋನ್ಯಭಾವವೇ ಇಂದಿಗೂ ಪಶ್ಚಿಮ ಘಟ್ಟಗಳ ಜೀವಂತಿಕೆಯನ್ನು ಹಿಡಿದಿಟ್ಟಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸಲು ಹೊರಡುವುದು ಜೀವವಿರೋಧಿ, ಅಮಾನವೀಯ ನಡೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಪರಿಸರ ಸಂರಕ್ಷಣೆ ಮಾಡುವ ನೈಜ ಕಾಳಜಿ ಇದ್ದಲ್ಲಿ, ಪಶ್ಚಿಮ ಘಟ್ಟ ಪ್ರದೇಶಗಳ ಗ್ರಾಮಗಳಲ್ಲಿ ತಲೆಮಾರುಗಳಿಂದ ವಾಸಮಾಡುತ್ತಿರುವ ಜನರ ಆತಂಕ, ಅಹವಾಲುಗಳನ್ನು ಆಲಿಸಬೇಕು. ಹಾಗೆಯೇ ರಾಜ್ಯ ಸರ್ಕಾರದ ಜೊತೆ ಅಗತ್ಯ ಚರ್ಚೆ ನಡೆಸಿ, ಎಲ್ಲರೂ ಒಪ್ಪುವಂತಹ ಒಮ್ಮತದ ನಿರ್ಣಯಕ್ಕೆ ಬರಬೇಕು. ಹೀಗೆ ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರವನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಈವರೆಗೆ 6 ಬಾರಿ ವರದಿ ಜಾರಿ ಮಾಡಬೇಕೆಂದು ಕೇಂದ್ರ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕದಲ್ಲಿ ತಿರಸ್ಕರಿಸಿ, ಸ್ಪಷ್ಟನೆಯನ್ನು ಸಹ ನೀಡಲಾಗಿದೆ. ಆದರೂ ಕೇಂದ್ರ ನಮ್ಮ ದನಿಗೆ ಕಿವಿಗೊಡದೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ತನ್ನ ನಿಲುವನ್ನು ಹೇರಲು ಬಯಸುತ್ತಿರುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
2024ರ ಜುಲೈ 31 ರಂದು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು, ಕಸ್ತೂರಿ ರಂಗನ್ ವರದಿ ಜಾರಿ ಮಾಡುವಂತೆ ಕರಡು ಅಧಿಸೂಚನೆ ಹೊರಡಿಸಿತ್ತು. 26 ಸೆಪ್ಟೆಂಬರ್ 2024ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಅಧಿಸೂಚನೆಯ ವಿರುದ್ಧ ನಿರ್ಣಯ ಕೈಗೊಂಡು, ಕೇಂದ್ರಕ್ಕೆ ವಾಸ್ತವ ಸಂಗತಿಯ ಮನವರಿಕೆಯನ್ನು ಸಹ ಮಾಡಕೊಡಲಾಗಿತ್ತು. ಈಗ ಮತ್ತೆ ಕೇಂದ್ರ ಸರ್ಕಾರವು ಕನ್ನಡಿಗರ ಬದುಕಿನ ಜೊತೆ ಚೆಲ್ಲಾಟವಾಡುವ ದುಷ್ಟ ಕಾರ್ಯಕ್ಕೆ ಕೈಹಾಕಿದೆ. ಇದು ಪಕ್ಷ ಸಿದ್ಧಾಂತ ಹಾಗೂ ರಾಜಕೀಯವನ್ನು ಮೀರಿದ ವಿಚಾರ. ಜನರ ಬದುಕನ್ನು ಮೀರಿದ ಸಿದ್ಧಾಂತ ಯಾವುದು ಇಲ್ಲ ಎನ್ನುವುದು ನನ್ನ ನಂಬಿಕೆ. ಹೀಗಾಗಿ ವಿಪಕ್ಷಗಳ ನಾಯಕರು ಕೂಡ ಈ ವರದಿ ಜಾರಿಯಾಗದಂತೆ ನಾವು ಸದನದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲಿಸುತ್ತಾರೆ, ಹಾಗೆಯೇ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ತನ್ನ ನಿಲುವನ್ನು ಬದಲಿಸಿಕೊಳ್ಳುವಂತೆ ಮನವೊಲಿಸುತ್ತಾರೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.
ಪಶ್ಚಿಮ ಘಟ್ಟ ಭಾಗದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮೊಂದಿಗೆ ನಮ್ಮ ಸರ್ಕಾರವಿದೆ. ವರದಿ ಜಾರಿಯನ್ನು ತಡೆಯಲು ಒಂದು ಸರ್ಕಾರವಾಗಿ ಯಾವೆಲ್ಲಾ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆ ಅದನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.





