ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ₹15 ಲಕ್ಷ ನೀಡಲಾಗುತ್ತದೆ. ₹36 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 32 ಕ್ರೀಡಾಂಗಣಗಳ ಅಭಿವೃದ್ಧಿ ಮಾಡಲಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಕ್ರೀಡಾ ಸಚಿವನಾಗಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದೇನೆ ಎಂಬುದಾಗಿ ಡಿಸಿಎಂ ಡಾ.ಜಿ ಪರಮೇಶ್ವರ್ ಘೋಷಿಸಿದ್ದಾರೆ.
ಇಂದು ಅವರು, ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಉಪ ಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ. ನಾನು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದೇನೆ ಎಂದಿದ್ದಾರೆ.
ಕ್ರೀಡಾಳುಗಳಿಗೆ ಉತ್ತೇಜನ ನೀಡುವ ಸಲುವಾಗಿ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ಗಳಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ವಿಶೇಷ ಪ್ರೋತ್ಸಾಹಧನ ಹಾಗೂ ಪದಕ ವಿಜೇತರಿಗೆ ಹೆಚ್ಚುವರಿಯಾಗಿ ₹15 ಲಕ್ಷ ನಗದು ಬಹುಮಾನವನ್ನು ನೀಡುತ್ತದ್ದೇವೆ. ಈ ವರ್ಷ ಸ್ಕಾಟ್ಲೆಂಡ್ನ ಗ್ಲಾಸ್ಕೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರಿಗೆ ಒಟ್ಟು ₹20 ಲಕ್ಷ ನೀಡಿದ್ದೇವೆ. ಆ ಮೂಲಕ ಕ್ರೀಡಾ ಸಾಧಕರನ್ನು ಗುರುತಿಸಿ, ಅವರನ್ನು ಗೌರವಿಸಿ, ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದ ಯುವಜನತೆಯಲ್ಲಿ ಕ್ರೀಡಾಸ್ಪೂರ್ತಿಯನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ ಹೇಳಿದ್ದಾರೆ.
ಕ್ರೀಡಾಳುಗಳಿಗೆ ಪ್ರತಿ ಹಂತದಲ್ಲೂ ಉತ್ತಮ ಮೂಲಸೌಕರ್ಯ ಹಾಗೂ ಹೆಚ್ಚಿನ ಅವಕಾಶಗಳು ಲಭ್ಯವಾದರೆ ಅಸಾಧಾರಣ ಸಾಧನೆಗೈಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆ ನಮ್ಮ ಸರ್ಕಾರವು ₹36 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ವರ್ಷದಿಂದ ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡಾಕೂಟವನ್ನು ತಾಲ್ಲೂಕು ಮಟ್ಟದಿಂದಲೇ ವ್ಯವಸ್ಥಿತವಾಗಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಈ ಮೂಲಕ ಕ್ರೀಡೆಯನ್ನು ಯುವಜನರ ಬಳಿಗೆ ಕೊಂಡೊಯ್ದು, ಕರ್ನಾಟಕದ ಪ್ರತಿಯೊಂದು ಭಾಗದಿಂದಲೂ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ತಿಳಿಸಿದ್ದಾರೆ.
ಹಾಗೆಯೇ ಕ್ರೀಡಾ ಸಾಧನೆಯು ಕ್ರೀಡಾಳುಗಳ ಶೈಕ್ಷಣಿಕ ಬದುಕಿಗೆ ಅಡ್ಡಿಯಾಗಬಾರದು ಎಂಬ ಕಾಳಜಿ ನಮ್ಮದು. ಹೀಗಾಗಿ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ ಮೊದಲ ಬಾರಿಗೆ CET ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿಯನ್ನು ಪರಿಚಯಿಸಲಾಯಿತು. ಆ ಪ್ರಯತ್ನದ ಫಲವಾಗಿ ಪ್ರಸಕ್ತ ಸಾಲಿನಲ್ಲಿ ಮೀಸಲಾತಿಯ ಮೂಲಕ 115 ವಿದ್ಯಾರ್ಥಿ ಕ್ರೀಡಾಪಟುಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಪಡೆಯಲು ಸಾಧ್ಯವಾಗಿದೆ. ಹೀಗೆ ಕ್ರೀಡಾ ಮೀಸಲಾತಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ಮೂಲಕ ನಮ್ಮ ಯುವಜನರು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈಯಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದಿದ್ದಾರೆ.
ಅಂತೆಯೇ, ರಾಜ್ಯದ 72,000 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಸುಮಾರು 2,000 ಹುದ್ದೆಗಳು ರಾಜ್ಯದ ಕ್ರೀಡಾ ಸಾಧಕರಿಗೆ ದೊರೆಯಲಿವೆ. ಇದರ ಜೊತೆಗೆ ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪದಕ ಗೆದ್ದ 13 ಕ್ರೀಡಾಪಟುಗಳನ್ನು ವಿಶೇಷ ನೇಮಕಾತಿ ಮೂಲಕ ‘ಎ’ ಮತ್ತು ‘ಬಿ’ ಗುಂಪಿನ ಸರ್ಕಾರಿ ಹುದ್ದೆಗಳಿಗೂ ನೇಮಕ ಮಾಡಿ ಗೌರವಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ಕ್ರೀಡೆ & ಶಿಕ್ಷಣದ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿಕೊಳ್ಳಬಾರದು ಎಂಬ ಸದುದ್ದೇಶದಿಂದ ಮಾನ್ಯತೆ ಪಡೆದ 34 ಕ್ರೀಡೆಗಳಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಶೇ. 15 ರಷ್ಟು ಹಾಜರಾತಿ ವಿನಾಯಿತಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಶೇ. 25ರಷ್ಟು ಹಾಜರಾತಿ ವಿನಾಯಿತಿಯನ್ನು ನೀಡಲಾಗುತ್ತದೆ. ಕನಿಷ್ಠ ಶೇ.50 ರಷ್ಟು ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಈ ಮೂಲಕ ಕ್ರೀಡಾ ಸಾಧನೆ ಮಾಡಲು ಹೊರಟಿರುವ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತಿದ್ದೇವೆ ಎಂದಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶವನ್ನು ತೋರಿರುವ ಕರ್ನಾಟಕದ ಜೂನಿಯರ್ ಹಾಗೂ ಯೂತ್ ಬ್ಯಾಸ್ಕೆಟ್ಬಾಲ್ ತಂಡಗಳ ಆಟಗಾರರಿಗೆ ಅಗತ್ಯ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ಬ್ಯಾಸ್ಕೆಟ್ಬಾಲ್ ಅಭಿವೃದ್ಧಿಗೆ 5 ಎಕರೆ ಜಾಗವನ್ನು ಮೀಸಲಿಡಲು ನಿರ್ಧರಿಸಿದ್ದು, ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯವುಳ್ಳ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
2030ರ ಕಾಮನ್ವೆಲ್ತ್ ಗೇಮ್ಸ್ಗೂ ಮುನ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ₹5,000 ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಕಾಮನ್ವೆಲ್ತ್ ಗೇಮ್ಸ್ನ ಆಯ್ದ ಕ್ರೀಡಾ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲು ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ.
ಹೀಗೆ ನಮ್ಮ ರಾಜ್ಯದ ಅಸಾಧಾರಣ ಕ್ರೀಡಾ ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹವನ್ನು ಒದಗಿಸಿ, ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯವನ್ನು ಕಲ್ಪಿಸಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಕ್ರೀಡಾ ಸಾಮರ್ಥ್ಯವನ್ನು ಅನಾವರಣಗೊಳಿಸಲು ನಮ್ಮ ಸರ್ಕಾರ ಅಣಿಯಾಗಿದೆ. ಕ್ರೀಡಾ ಸಚಿವನಾಗಿ ನಾನು ಎಲ್ಲ ರೀತಿಯ ಸಂಪೂರ್ಣ ಸಹಕಾರ, ಅಗತ್ಯ ನೆರವನ್ನು ನೀಡಲಿದ್ದೇನೆ ಎಂಬುದಾಗಿ ಘೋಷಿಸಿದ್ದಾರೆ.





