ಸರ್ಕಾರ ಟೀಕಿಸಿ, ನಮ್ಮ ದೇಶವನ್ನಲ್ಲ: ವಿಕೃತಿ ಮೆರೆದ ಖಲಿಸ್ತಾನಿಗಳಿಗೆ ಕಿರಣ್ ರಿಜಿಜು ಖಡಕ್ ವಾರ್ನಿಂಗ್..!

ನ್ಯೂಯಾರ್ಕ್: ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆಯ ಕಾರ್ಯಕರ್ತರು ಭಾರತದ ವಿರುದ್ಧ ಘೋಷಣೆ ಕೂಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕಿ, ಮತ್ತೊಂದು ಧ್ವಜವನ್ನು ವ್ಯಕ್ತಿಯೊಬ್ಬನ ಕಾಲಿಗೆ ಕಟ್ಟಿ ವಿಕೃತವಾಗಿ ಪೋಸ್ ಕೊಟ್ಟಿದ್ದಾರೆ. ಈ ವಿಚಾರಕ್ಕೆ ಇದೀಗ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸರ್ಕಾರವನ್ನು ಟೀಕಿಸಿ, ಆದರೆ, ನಮ್ಮ ದೇಶವನ್ನು ನಿಂದಿಸಬೇಡಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಖಲಿಸ್ತಾನಿ ಬೆಂಬಲಿಗರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇದನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ… ನಮ್ಮ ಧ್ವಜಕ್ಕೆ ಮತ್ತು ನನ್ನ ದೇಶಕ್ಕೆ ಅಪಮಾನ ಮಾಡಬೇಡಿ. ಇದಕ್ಕೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆ. ನಾವು ಯಾವಾಗಲೂ ಹೇಳುತ್ತೇವೆ—ನಿಮಗೆ ಆರ್‌ಎಸ್‌ಎಸ್, ಬಿಜೆಪಿ ಅಥವಾ ಸರ್ಕಾರದ ವಿರುದ್ಧ ಟೀಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ನಮ್ಮ ರಾಷ್ಟ್ರವನ್ನು ನಿಂದಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಕ್ರೀಡಾಂಗಣದ ಹೊರಗೆ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜವನ್ನು ಹರಿದು, ಕಾಲಿನಿಂದ ತುಳಿದು ವಿಕೃತಿ ಮೆರೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಕಿರಣ್ ರಿಜಿಜು ಅವರು ಕಠಿಣ ಸಂದೇಶ ರವಾನಿಸಿದ್ದಾರೆ.

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಒಳಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ‘ಯುನಿವರ್ಸಲ್ ವನ್‌ನೆಸ್ ಸೆಲೆಬ್ರೇಷನ್’ ಕಾರ್ಯಕ್ರಮದಲ್ಲಿ 6,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇದಕ್ಕೂ ಮುನ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಇನ್ಫೋಸಿಸ್ ಥಿಯೇಟರ್‌ನಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ 6,000ಕ್ಕೂ ಹೆಚ್ಚು ಸದಸ್ಯರು ಹಾಗೂ ವಿವಿಧ ಧರ್ಮಗಳ ಮುಖಂಡರನ್ನು ಉದ್ದೇಶಿಸಿ ಮೋಹನ್ ಭಾಗವತ್ ಮಾತನಾಡಿದ್ದರು.

ವೈವಿಧ್ಯತೆಯನ್ನು ಅಪ್ಪಿಕೊಳ್ಳುವಂತೆ ಹಾಗೂ ವಿವಿಧ ಸಮುದಾಯಗಳಿಗೆ ಬೆಂಬಲ ನೀಡುವಂತೆ ಕರೆ ನೀಡಿದ ಭಾಗವತ್, “ವೈವಿಧ್ಯತೆಯಲ್ಲಿ ಏಕತೆ ಭಾರತದ ಡಿಎನ್‌ಎಯಲ್ಲೇ ಇದೆ” ಎಂದು ಹೇಳಿದರು. ಇದನ್ನು ಸಂಭ್ರಮಿಸಬೇಕು, ಗೌರವಿಸಬೇಕು ಮತ್ತು ಒಪ್ಪಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಭಾಗವತ್ ಮುಖ್ಯ ಭಾಷಣ ಮಾಡುವ ಮೊದಲು ವಿವಿಧ ಧರ್ಮಗಳ ಮುಖಂಡರು ಏಕತೆ, ಒಗ್ಗಟ್ಟು ಮತ್ತು ವೈವಿಧ್ಯತೆ, ದಯೆ, ಕರುಣೆ ಹಾಗೂ ಪರಸ್ಪರ ಸಹಾಯದ ಅಗತ್ಯದ ಸಂದೇಶವನ್ನು ಸಾರಿದರು.

ಇದೇ ಸಮಯದಲ್ಲಿ ಕ್ರೀಡಾಂಗಣದ ಹೊರಗೆ ಜಮಾಯಿಸಿದ ನಿಷೇಧಿತ ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆಯ ಕಾರ್ಯಕರ್ತರು ಭಾರತದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಅಷ್ಟಕ್ಕೇ ನಿಲ್ಲದೆ, ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕಿ, ಮತ್ತೊಂದು ಧ್ವಜವನ್ನು ವ್ಯಕ್ತಿಯೊಬ್ಬನ ಕಾಲಿಗೆ ಕಟ್ಟಿ ವಿಕೃತವಾಗಿ ಪೋಸ್ ಕೊಟ್ಟಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others